ನವದೆಹಲಿ, ಜೂ.13 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲ್ಲೇ ಇದ್ದು ಕಳೆದ ಒಂದು ದಿನದಲ್ಲೇ 11,458 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಹಾಗೆಯೇ ಒಂದೇ ದಿನದಲ್ಲಿ 386 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲೀಗ 3,08,993 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 8,884 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೇಲೇರುತ್ತಲ್ಲೇ ಇದ್ದು 15 ದಿನಗಳ ಹಿಂದೆ ಹತ್ತನೇ ಸ್ಥಾನದಲ್ಲಿದ್ದ ಭಾರತ ಶುಕ್ರವಾರ ಬ್ರಿಟನ್ ಅನ್ನು ಹಿಂದಿಕ್ಕಿ ಈಗ 4ನೇ ಸ್ಥಾನದಲ್ಲಿದೆ.
ಇನ್ನು ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೂ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆಯು ಹೆಚ್ಚಾಗುತ್ತಿದ್ದು ಸಕ್ರಿಯ ಪ್ರಕರಣಗಳಿಗಿಂತ ಅಧಿಕವಾಗಿ ಗುಣಮುಖರಾದವರ ಸಂಖ್ಯೆಯಿದೆ. ಈವರೆಗೆ 1,54,330 ಗುಣಮುಖರಾಗಿದ್ದು 1,45,779 ಪ್ರಕರಣಗಳು ಸಕ್ರಿಯವಾಗಿವೆ.
ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 1,01,141 ಮಂದಿಗೆ ಸೋಂಕು ತಗುಲಿದ್ದು 3,717 ಮಂದಿ ಮೃತಪಟ್ಟಿದ್ದಾರೆ. 47,796 ಮಂದಿ ಗುಣಮುಖರಾಗಿದ್ದು 49,628 ಸಕ್ರಿಯ ಪ್ರಕರಣಗಳಾಗಿವೆ. ಕರ್ನಾಟಕದಲ್ಲಿ 6,516 ಮಂದಿಗೆ ಸೋಂಕು ದೃಢಪಟ್ಟಿದ್ದು 79 ಮಂದಿ ಸಾವನ್ನಪ್ಪಿದ್ದಾರೆ. 2,997 ಸಕ್ರಿಯ ಪ್ರಕರಣಗಳಾಗಿದ್ದು 3,440 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 40,698, ದೆಹಲಿಯಲ್ಲಿ36,824, ಗುಜರಾತ್ನಲ್ಲಿ 22,527, ಉತ್ತರ ಪ್ರದೇಶದಲ್ಲಿ 12,616, ರಾಜಸ್ತಾನದಲ್ಲಿ 12,068, ಮಧ್ಯಪ್ರದೇಶದಲ್ಲಿ 10,443, ಪಶ್ಚಿಮ ಬಂಗಾಳದಲ್ಲಿ 10,244 ಕೊರೊನಾ ಪ್ರಕರಣ ಪತ್ತೆಯಾಗಿದ್ದು ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲಿ 2,322 ಪ್ರಕರಣಗಳು ದಾಖಲಾಗಿದೆ.