ಬೆಂಗಳೂರು, ಜೂ 13 (Daijiworld News/MSP): ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ತೀರ್ಮಾನವೂ ರಿಯಲ್ ಎಸ್ಟೇಟ್ , ಉಳ್ಳವರಿಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿದೆ. ಆದರೆ ಇದನ್ನು ವಿರೋಧಿಸಿ ಸರ್ಕಾರದ ಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥಿಸಿಕೊಂಡಿದ್ದು, ನಮ್ಮ ದೇಶದಲ್ಲಿ ಎಲ್ಲರಿಗೂ ಬೆಳೆ ಬೆಳೆಯುವ ಹಕ್ಕು ಇದೆ. ಈ ತಿದ್ದುಪಡಿಯಿಂದ ಯುವಕರು ಕೃಷಿಯತ್ತ ಹೆಚ್ಚು ಆಕರ್ಷಿತರಾಗಲಿದ್ದಾರೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿಗೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ಕೃಷಿ ಮಾಡುವ ಆಸಕ್ತರು ಭೂಮಿ ಖರೀದಿ ಮಾಡಬಹುದು . ಪ್ರತಿ ವರ್ಷ ಕೃಷಿ ವಿಶ್ವವಿದ್ಯಾಲಯಗಳಿಂದ ನಾಲ್ಕು ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ ,ಹೀಗಾಗಿ ಕೃಷಿಗಯಲ್ಲಿ ತೊಡಗಿಸಿಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ
ಆದರೆ ಇದಕ್ಕೆ ಕಟುವಾಗಿ ಟೀಕೆ ಮಾಡಿರುವ ಕಾಂಗ್ರೆಸ್ " ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಕೃಷಿ ಜಮೀನು ಖರೀದಿಸಿದರೂ ಅದು ಕೃಷಿ ಬಳಕೆಗೆ ಮಾತ್ರ ಎಂಬ ಕಠಿಣ ಷರತ್ತು ವಿಧಿಸದಿದ್ದರೆ ಉಳ್ಳವನು ಭೂಮಿಯ ಒಡೆಯನಾಗುತ್ತಾನೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಭೂ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ರೈತರು ತಮ್ಮ ಭೂಮಿ ಕಳೆದುಕೊಂಡು ಕೂಲಿ ಕಾರ್ಮಿಕರಾಗುತ್ತಾರೆ ಎಂದು ಸರ್ಕಾರದ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.