ಹಾಸನ, ಜೂ 13 (Daijiworld News/MSP): ’ಬಿ.ಎಸ್ ಯಡಿಯೂರಪ್ಪ ಅವರು ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತಾರಾ ? ನಾನು ಬದುಕಿದ್ದಾಗಲೇ ಹಾಸನದಲ್ಲಿ ತೋಟಗಾರಿಕೆ ಕಾಲೇಜು ತಂದೇ ತರುತ್ತೇನೆ" ಎಂದು ಹಾಸನಕ್ಕೆ ನಿಗದಿಯಾಗಿದ್ದ ತೋಟಗಾರಿಕಾ ಕಾಲೇಜನ್ನು ಸರಕಾರ ರದ್ದು ಪಡಿಸಿರುವುದಕ್ಕೆ ಶಾಸಕ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಿದರೇ ಎದುರಿಸುವ ಶಕ್ತಿ ನಮಗೆ ಇದೆ, ಎಲ್ಲಾ ನೋಡಿಕೊಂಡು ನಾವೇನು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ. ಯಡಿಯೂರಪ್ಪ ರದ್ದು ಮಾಡಿದರೆ ಏನಾಯಿತು, ನನಗೆ ಹೇಗೆ ಕೆಲಸ ಮಾಡಬೇಕು ಗೊತ್ತು ಎಂದು ರೇವಣ್ಣ ಸವಾಲು ಎಸೆದಿದ್ದಾರೆ.
"ಕಾಲೇಜು ರದ್ದು ಮಾಡಿದರೆ, ನಾನೇನು ಹೆದರಿಕೊಂಡು ಓಡಿ ಹೋಗುತ್ತೀನಾ? ನಾನು ಬದುಕಿದ್ದಾಗಲೇ ಹಾಸನಕ್ಕೆ ತೋಟಗಾರಿಕೆ ಕಾಲೇಜು ತಂದೇ ತರುತ್ತೇನೆ. ಈ ದೇವೇಗೌಡರ ಕುಟುಂಬದ ಬಗ್ಗೆ ಗೊತ್ತಿಲ್ಲವೇ ? ನಾನು ಹೆದರಿಕೊಂಡು ಸುಮ್ಮನೆ ಕೂತಿದ್ದೀನಿ ಎಂದು ಸಿಎಂ ಅಂದುಕೊಂಡಿರಬಹುದು. ದ್ವೇಷದ ರಾಜಕಾರಣ ಮಾಡಲ್ಲ ಎಂದ ಬಿಎಸ್ ವೈ ಈಗ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದ್ದಾರೆ.
ನನಗೆ ದ್ವೇಷದ ರಾಜಕಾರಣ ಎದುರಿಸುವ ಶಕ್ತಿ ಇದೆ. ಆದರೆ ಯಡಿಯೂರಪ್ಪನವರು ವಯಸ್ಸಾಗಿರುವ ಈ ಕಾಲದಲ್ಲಿ ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ವೇಳೆ ಹೂವಿನ ಬೆಳೆ ನಷ್ಟ ಸೇರಿ ಇತರೆ ಪರಿಹಾರದ ಹಣ ಸರಕಾರದಿಂದ ರೈತರಿಗೆ ಇನ್ನು ಬಂದಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಲ್ಯಾಂಡ್ ಮಾಫಿಯಾ ಮಾಡಲು ಮುಂದಾಗುತ್ತಿದೆ ಎಂದರು.