ನವದೆಹಲಿ, ಜೂ.13 (DaijiworldNews/MB) : "ಭಾರತ ಚೀನಾ ಗಡಿಯಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲು ಚೀನಾ ಭಾರತದ ಮಧ್ಯೆ ಕಾರ್ಪ್ಸ್ ಕಮಾಂಡರ್ ಮಟ್ಟದಿಂದ ಮಾತುಕತೆ ಆರಂಭವಾಗಿದ್ದು ನಿರಂತರವಾಗಿ ಮುಂದುವರಿದು ಬಳಿಕ ಸ್ಥಳೀಯ ಮಟ್ಟದಲ್ಲಿ, ಕಮಾಂಡರ್ಗಳ ಮಟ್ಟದಲ್ಲಿ ನಡೆದು ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ತಿಳಿಸಿದರು.
"ಭಾರತ ಚೀನಾ ಮಧ್ಯೆ ಗಂಭೀರವಾಗಿ ಮಾತುಕತೆ ನಡೆದಿದ್ದು ಭಿನ್ನಾಭಿಪ್ರಾಯಗಳು ಮರೆಯಾಗಿ ಗಡಿಯಲ್ಲಿ ಶಾಂತಿ ನೆಲೆಸುವ ಬಗ್ಗೆ ನಂಬಿಕೆಯಿದೆ" ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ನೇಪಾಳದ ಸಂಬಂಧದ ಬಗ್ಗೆ ಮಾತನಾಡಿದ ಅವರು, "ನೇಪಾಳ ದೇಶದೊಂದಿಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸಂಬಂಧವಿದ್ದು ಇದರ ಮೇಲೆ ನಂಬಿಕೆ ಇರಿಸಲಾಗಿದೆ. ನೇಪಾಳದೊಂದಿಗೆ ಈ ಸಂಬಂಧ ಇನ್ನೂ ಗಟ್ಟಿಯಾಗಿ ಇರಲಿದೆ" ಎಂದು ಹೇಳಿದರು.
ಶುಕ್ರವಾರ ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ, "ಭಾರತವು ಗಡಿ ವಿಚಾರದಲ್ಲಿ ನೇಪಾಳಕ್ಕೆ ಮೋಸ ಮಾಡಿದೆ" ಎಂದು ಹೇಳಿದ್ದರು.