ಶ್ರೀನಗರ, ಜೂ 13 (DaijiworldNews/PY) : ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಪಡೆಗಳು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು-ಕಾಶ್ಮೀರದ ಕಮಲ್ ಕೋಟ್ ಸೆಕ್ಟರ್ನಲ್ಲಿ ಶನಿವಾರ ಅಪ್ರಚೋದಿತ ದಾಳಿ ನಡೆಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಉರಿ ಪ್ರದೇಶ ಕಮಲ್ ಕೋಟ್ ಸೆಕ್ಟರ್ ಮೇಲೆ ಪಾಕಿಸ್ತಾನ ಪಡೆಗಳು ಬೆಳಿಗ್ಗೆ 9.20ರ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಈಗಲೂ ಮುಂದುವರೆದಿದೆ. ಪಾಕ್ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆಯು ಪ್ರತಿಯಾದ ದಾಳಿ ನಡೆಸುವ ಮೂಲಕ ಸೂಕ್ತವಾದ ಪ್ರತಿಕ್ರಿಯೆ ನೀಡಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ.
ಪಾಕ್ ಪಡೆಗಳು ಶುಕ್ರವಾರವೂ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದ್ದು, ಈ ದಾಳಿಗೆ ರಾಂಪುರ ಸೆಕ್ಟರ್ನಲ್ಲಿ 48 ವರ್ಷದ ಅಖ್ತರ್ ಬೇಗಂ ಎಂಬುವರು ಅವರ ಮನೆಯಲ್ಲೇ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ 23 ವರ್ಷದ ಯುವತಿಯೊಬ್ಬರು ಗಾಯಗೊಂಡಿದ್ದರು.
ಪಾಕ್ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ನಾಲ್ಕು ಮನೆಗಳು ಹಾಗೂ ಮಸೀದಿಗೆ ಹಾನಿಯಾಗಿದ್ದು, ಅಲ್ಲದೇ, ಅಲ್ಲಿನ ಹಲವು ಕುಟುಂಬಗಳನ್ನು ಪುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.