ಬೆಳಗಾವಿ, ಜೂ 13 (DaijiworldNews/PY) : ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಯು ಕಾರ್ಯಕರ್ತರ ಪಕ್ಷವೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ನಿರೀಕ್ಷೆಯಂತೆ ಕೆಲಸ ಮಾಡುವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ರಾಜ್ಯಸಭೆಗೆ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಬಂದು, ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇನೆ. ಕೇಂದ್ರದಿಂದ ಹೆಚ್ಚಿನ ಅನುದಾನ ತರಲು ಹಾಗೂ ಅನುದಾನವನ್ನು ಸದ್ಭಳಕೆ ಮಾಡಲು ಪ್ರಯತ್ನಿಸುವೆ. ನನ್ನ ನಿರೀಕ್ಷೆಗೆ ಮೀರಿದಂತಹ ಅವಕಾಶವನ್ನು ಪಕ್ಷ ನೀಡಿದೆ ಎಂದು ತಿಳಿಸಿದರು.
ಈ ಹಿಂದೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅನುಭವದ ಮೇರೆಗೆ ಮುಂದೆಯೂ ಕೆಲಸ ಮಾಡುತ್ತೇನೆ ಎಂದರು.
ಬಣ ರಾಜಕೀಯ ಎನ್ನುವುದು ನಮ್ಮಲ್ಲಿ ಇಲ್ಲ. ಬಹಳಷ್ಟು ಆಕಾಂಕ್ಷಿಗಳು ಚುನಾವಣೆ ಸಂದರ್ಭ ಟಿಕೆಟ್ ಕೇಳುವುದು ಸಹಜ. ಈ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ವರಿಷ್ಠರಿಗೆ ಬಿಟ್ಟಿದ್ದು. ವರಿಷ್ಠರ ಆಯ್ಕೆಯ ನಂತರ ಎಲ್ಲರೂ ಜೊತೆಯಾಗಿ ಕೆಲಸ ಮಾಡುತ್ತೇವೆ. ರಾಜ್ಯಸಭೆಗೆ ಆಕಾಂಕ್ಷಿಗಳಾಗಿದ್ದ ಪ್ರಭಾಕರ ಕೋರೆ ಹಾಗೂ ರಮೇಶ ಕತ್ತಿ ಅವರು ಕೂಡಾ ನನ್ನನ್ನು ಆಯ್ಕೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಇಲ್ಲಿಯವರೆಗೆ ರಾಜ್ಯ ಕುರಿತು ಬೇರೆ ರೀತಿಯಾದ ಕಲ್ಪನೆ ಇತ್ತು. ನನ್ನನ್ನು ಆಯ್ಕೆ ಮಡುವ ಮೂಲಕ ಸಾಮಾನ್ಯ ಕಾರ್ಯಕರ್ತರೂ ಇದಕ್ಕೆ ಪ್ರವೇಶ ಮಾಡಬಹುದು ಎನ್ನುವುದನ್ನು ಪಕ್ಷ ತೋರಿಸಿದೆ. ಬಿಜೆಪಿಯು ಈ ಮೂಲಕ ಹೊಸ ಪರಂಪರೆ ಹುಟ್ಟು ಹಾಕಿ ಕೊಟ್ಟಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ತೀವ್ರವಾದ ಚರ್ಚೆಯಾಗಿದ್ದು, ತಮಗೆ ಸ್ಥಾನಮಾನ ನೀಡಬೇಕೆಂದು ಅಲ್ಲಿನ ಕಾರ್ಯಕರ್ತರೂ ಕೂಡಾ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದರು.