ರಾಯಚೂರು, ಜೂ 13 (DaijiworldNews/PY) : ಕೊರೊನಾ ಬಗ್ಗೆ ಮಾಧ್ಯಮಗಳಲ್ಲಿ ಹೊಸ ಹೊಸ ಪದ ಬಳಕೆ ಮಾಡಿ ಸೋಂಕಿತರ ಸಂಖ್ಯೆಯೊಂದನ್ನೇ ಹೆಚ್ಚು ಪ್ರಸಾರ ಮಾಡಲಾಗುತ್ತಿದ್ದು, ಈ ಕಾರಣದಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿದೆ. ಸೋಂಕಿತರ ಪೈಕಿ ಎಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಎಷ್ಟಿದೆ ಎನ್ನುವುದರ ಬಗ್ಗೆ ಅಂಕಿ-ಅಂಶಗಳನ್ನು ಜನರ ಮುಂದೆ ಇಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೊರೊನಾ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಿಫಾ, ಸಾರ್ಸ್ನಂತಹ ಸೋಂಕುಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಸೋಂಕಿನ ಮರಣ ಪ್ರಮಾಣ ಕಡಿಮೆ ಇದೆ. ಈವರೆಗೆ ರಾಜ್ಯದಲ್ಲಿ 6,516 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಶೇ.52.8 ರಷ್ಟು ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮರಣ ಪ್ರಮಾಣ ಶೇ.1.2 ರಷ್ಟು ಮಾತ್ರ ಇದೆ. ಉಸಿರಾಟದ ತೊಂದರಯಿಂದ ಬಳಲುವವರಿಗೆ ಮಾತ್ರ ಸೋಂಕು ಅಪಾಯಕಾರಿಯಾಗಿದೆ. ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತಲೂ ಮರಣದ ಸಂಖ್ಯೆ ಕಡಿಮೆಯಿದೆ. ಜನರು ಭಯಪಡುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಕೂಡಾ ಬಳಸಬೇಕು. ಇಷ್ಟು ಸಣ್ಣ ಕೆಲಸದಿಂದ ದೊಡ್ಡಮಟ್ಟದ ಬದಲಾವಣೆ ತರಬಹುದಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಬರುವ ನೆಗಡಿ, ಕೆಮ್ಮು ಹಾಗೂ ಜ್ವರಕ್ಕೆ ಜನರು ಚಿಕಿತ್ಸೆ ಪಡೆಯುವುದಕ್ಕಾಗಿ ಮನೆಯಿಂದ ಹೊರ ಬರದಂತಂಹ ಸ್ಥಿತಿ ನಿರ್ಮಾಣವಾಗಿದೆ. ಜನರು ಸೋಂಕಿನ ತಪಾಸಣೆ ಮಾಡಿಕೊಳ್ಳಲು ಹಿಂಜರಿಯಬಾರದು. ಈ ವಿಚಾರದಲ್ಲಿ ಸರ್ಕಾರದೊಂದಿಗೆ ಜನರು ಸಹಕಾರ ನೀಡಿದರೆ ಮಾತ್ರ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಬಹುದು ಎಂದರು.
ಮುಂದಿನ ಮೂರು ತಿಂಗಳುಗಳಲ್ಲಿ ರಾಯಚೂರಿನಲ್ಲಿರುವ ಓಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಲಾಗುವುದು ಎಂದು ಭರವಸೆ ನೀಡಿದರು.
ರಿಮ್ಸ್ ವೈದ್ಯಕೀಯ ಸಂಸ್ಥೆಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲೂ ಕೆಲವು ನ್ಯೂನತೆಗಳು ಕಂಡುಬಂದಿದ್ದು, ಈ ವಿಚಾರದ ಬಗ್ಗೆ ನಿರ್ದೇಶಕರಿಗೆ ಸ್ಪಷ್ಟವಾದ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೇ, ಹೆಚ್ಚು ಅನುದಾನ ಪಡೆದುಕೊಳ್ಳುವ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ಅಲ್ಲಿಯ ಪರಿಸ್ಥಿತಿಯನ್ನೂ ಕೂಡಾ ಸುಧಾರಿಸಲಾಗುವುದು ಎಂದು ತಿಳಿಸಿದರು.