ಬೆಂಗಳೂರು, ಜೂ.13 (DaijiworldNews/MB) : ಕೊರೊನಾ ಸೋಂಕಿತ ಅಥವಾ ಶಂಕಿತರು ಧಾರ್ಮಿಕ ಸ್ಥಳ, ಮಾಲ್ ಗಳು ಮತ್ತು ರೆಸ್ಟೋರೆಂಟ್ ಪ್ರವೇಶದ ಕುರಿತಾಗಿ ಮಾರ್ಗಸೂಚಿಯನ್ನು ಪರಿಷ್ಕರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ನಿರ್ದೇಶನ ನೀಡಿದ್ದು ಮದುವೆ, ಅಂತ್ಯಸಂಸ್ಕಾರದಲ್ಲಿ ಇಂತಿಷ್ಟೇ ಜನ ಪಾಲ್ಗೊಳ್ಳುವಂತೆ ನಿರ್ಬಂಧ ಹೇರಿರುವಂತೆ ದೇವಾಲಯಗಳಿಗೆ ತೆರಳುವ ಭಕ್ತಾಧಿಗಳ ಸಂಖ್ಯೆಯಲ್ಲಿ ಯಾವುದೇ ನಿರ್ಬಂಧ ಹೇರಿಲ್ಲ. ಹಾಗೆಯೇ ಸೋಂಕಿತರು ಅಥವಾ ಶಂಕಿತರು ದೇವಾಲಯ ಪ್ರವೇಶಿಸಬಹುದೇ ಎಂಬುದರ ಬಗೆಯೂ ಮಾರ್ಗಸೂಚಿಯಲ್ಲಿ ತಿಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಲೆಟ್ಜ್ ಕಿಟ್ ಫೌಂಡೇಷನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳಿಗೆ ಸೂಚನೆ ನೀಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ಸಂದರ್ಭದಲ್ಲಿ ಈ ಆದೇಶ ನೀಡಿರುವ ಹೈಕೋರ್ಟ್ ಮಾರ್ಗಸೂಚಿ ಪಟ್ಟಿಯಲ್ಲಿ ಕಠಿಣ ಕ್ರಮಗಳಿವೆ, ಆದರೆ ಉಲ್ಲಂಘಿಸುವವರಿಗೆ ದಂಡ ವಿಧಿಸಬಹುದಾ ಅಥವಾ ಎಸ್ಒಪಿಗೆ ಕಾನೂನು ಬಲವಿದೆಯೇ ಎಂದು ಪ್ರಶ್ನಿಸಿದೆ.
ಹಾಗೆಯೇ ರಾಜ್ಯಸರ್ಕಾರಗಳು ಮಾರ್ಗಸೂಚಿ ಅನುಷ್ಠಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ದೇವಾಲಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಹೇಳಿದೆ.