ನವದೆಹಲಿ, ಜೂ 13 (DaijiworldNews/PY) : ಕೊರೊನಾ ಸೋಂಕು ಪ್ರಸರಣವನ್ನು ತಪ್ಪಿಸುವ ಸಲುವಾಗಿ ಜನರಿಗೆ ಸೈಕಲ್ನಂತಹ ಮೋಟಾರೇತರ ವಾಹನಗಳನ್ನು ಬಳಕೆ ಮಾಡಲು ಉತ್ತೇಜನ ನೀಡಬೇಕು ಎಂದು ಕೇಂದ್ರ ಹಾಗೂ ನಗರ ವ್ಯವಹಾರಗಳ ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ.
ಇದರೊಂದಿಗೆ, ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ನಗದುರಹಿತವಾದಂತ ವಹಿವಾಟು ವ್ಯವಸ್ಥೆಯ ಜಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಸಚಿವಾಲಯ ಸಲಹೆ ನೀಡಿದೆ.
ರಾಜ್ಯಗಳಲ್ಲಿ ಮೆಟ್ರೊ ರೈಲು ಕಂಪೆನಿಗಳಿಗೆ ನೀಡಿರುವ ಪ್ರತ್ಯೇಕ ಸೂಚನೆಯಲ್ಲಿ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು, ದೇಶಾದ್ಯಂತ ಮೋಟಾರು ರಹಿತ ಸಾರಿಗೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ನಗರಗಳಲ್ಲಿ ಐದು ಕಿ.ಮೀ ಒಳಗಿನ ಪ್ರಯಾಣಕ್ಕಾಗಿ ಮೋಟಾರು ರಹಿತ ವಾಹನಗಳ ಬಳಕೆ ಉತ್ತಮವಾಗಿದೆ. ಇದನ್ನು ಕೊರೊನಾ ಬಿಕ್ಕಟ್ಟಿನ ಸಂದರ್ಭ ಜಾರಿಗೊಳಿಸುವುದು ಉತ್ತಮ. ಇದರ ಜಾರಿಗೆ ವೆಚ್ಚವೂ ಕಡಿಮೆಯಿದ್ದು, ಮಾನವ ಸಂಪನ್ಮೂಲದ ಬಳಕೆಯೂ ಅಧಿಕ ಬೇಕಾಗದು ಎಂದಿದೆ.
ನ್ಯೂಯಾರ್ಕ್ನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ 40 ಮೈಲುಗಳ ನೂತನವಾದ ಪಥವನ್ನು ಸೇರ್ಪಡೆಗೊಳಿಸಲಾಗಿದೆ. ಒಕ್ಲ್ಯಾಂಡ್ ರಸ್ತೆಗಳಲ್ಲಿ ಶೇ.10ರಷ್ಟನ್ನು ಮೋಟಾರು ವಾಹನಗಳಿಗೆ ಬಂದ್ ಮಾಡಿದೆ. ಅಲ್ಲದೇ, ಕೊಲಂಬಿಯಾದ ಬೊಗೊಟಾದಲ್ಲಿ ಒಂದೇ ರಾತ್ರಿ ಸುಮಾರು 76 ಕಿ.ಮೀ ಉದ್ದದ ಮಾರ್ಗವನ್ನು ಸೈಕಲ್ ಸವಾರರಿಗೆಂದೇ ಅಭಿವೃದ್ದಿಪಡಿಸಲಾಗಿದೆ ಎಂದು ಸಚಿವಾಳಯ ತಿಳಿಸಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರಯಾಣಿಕರಲ್ಲಿ ಸ್ಪಷ್ಟವಾದ ಭರವಸೆಯನ್ನು ಮೂಡಿಸುವ ಕಾರ್ಯದೊಂದಿಗೆ ಪುನರಾರಂಭ ಮಾಡಬೇಕು. ಸಾರ್ವಜನಿಕ ವಹಿವಾಟಿನಲ್ಲಿ ಜನರ ಸಂಪರ್ಕ ತಪ್ಪಿಸುವ ಸಲುವಾಗಿ ಭೀಮ್, ಫೋನ್ ಪೇ, ಗೂಗಲ್ ಪೇ ನಂತಹ ವ್ಯವಸ್ಥೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದು ಸೂಚನೆ ನೀಡಿದೆ.