ಬೆಂಗಳೂರು, ಜೂ 13 (DaijiworldNews/PY) : ಇನ್ನು ಮುಂದೆ ಕೃಷಿಕರು, ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ದೂರವಾಣಿ, ಮೊಬೈಲ್ ಕರೆಯನ್ನು ಸ್ವೀಕರಿಸುವ ಸಂದರ್ಭ ಹಲೋ ಬದಲು ಜೈ ಕಿಸಾನ್ ಎಂದು ಹೇಳಬೇಕು. ಇದು ಸಾಮಾಜಿಕ ಆಂದೋಲನವಾಗಿ ಜಗತ್ತಿಗೆ ಅನ್ನದಾತನ ಶಕ್ತಿ ತಿಳಿಯಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಕೆವಿಕೆಯಲ್ಲಿ ಮಾತನಾಡಿದ ಅವರು, ತಮ್ಮ ನೂತನ ತಳಿಗಳು ಹಾಗೂ ತಂತ್ರಜ್ಞಾನಗಳಿಗೆ ಖಾಸಗಿ ಕಂಪೆನಿಯವರು ವ್ಯಾಪಕಾವಗಿ ಪ್ರಚಾರ ನೀಡುವಂತೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳೂ ಕೂಡಾ ವ್ಯಾಪಕವಾದ ಪ್ರಚಾರ ನೀಡಿ ತಂತ್ರಜ್ಞಾನಗಳು ಶೀಘ್ರವಾಗಿ ರೈತರ ಮನೆಬಾಗಿಲಿಗೆ ತಲುಪುವಂತೆ ಮಾಡಲು ಶ್ರಮವಹಿಸಬೇಕು. ಯಾವುದೇ ಇಲಾಖೆಯಾದರೂ, ಪ್ರಪಂಚದ ಯಾವುದೇ ರಂಗದಲ್ಲಾದರೂ ಅಭಿವೃದ್ದಿ ಹೊಂದಿದರೂ ಕೂಡಾ ಜಗತ್ತಿಗೆ ಅನ್ನ ನೀಡುವ ರೈತನ ಮುಂದೆ ತಲೆಬಾಗಲೇಬೇಕು. ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದರು.
ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಕೃಷಿಕರಿಗೆ ಹತ್ತಿರವಾಗಿ ನೂತನ ತಂತ್ರಜ್ಞಾನಗಳನ್ನು ರೈತರು ಅನುಸರಿಸಿ ಶ್ರಮ ಕಡಿತಗೊಳಿಸಿ ಅಧಿಕ ಇಳುವರಿ ಪಡೆದುಕೊಳ್ಳಲು ಪ್ರೇರೇಪಿಸಬೇಕು. ರೈತರು ಒಂದೇ ಬೆಳೆಯನ್ನು ಬೆಳೆಸುವ ಬದಲಾಗಿ ಬಹು ಬೆಳೆಗಳನ್ನು ಬೆಳೆದು ಲಾಭಗಳಿಸಲು ಮುಂದಾಗಬೇಕು. ರೈತರಿಗೆ ಗುರುತಿನ ಚೀಟಿಯನ್ನು ನೀಡುವಂತಹ ಮಹತ್ತರವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಗುರುತಿನ ಚೀಟಿ ಹೊಂದಿದ ರೈತ ತಾನು ಭಾರತದ ಸ್ವಾಭಿಮಾನಿ ರೈತ ಎಂದು ಹೆಮ್ಮೆಯಿಂದ ಎದೆಯೆತ್ತಿ ಹೇಳಿಕೊಳ್ಳಬಹುದು ಎಂದು ಹೇಳಿದರು.