ನವದೆಹಲಿ, ಜೂ 13 (DaijiworldNews/PY) : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ವಿಚಾರವಾಗಿ ಯಥಾಸ್ಥಿತಿ ಕಾಪಾಡುವಂತೆ ನೀಡಿದ್ದ ಆದೇಶದ ಕುರಿತು ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಮೆಟ್ಟಿಲೇರಿದೆ.
ಈ ಪ್ರಕರಣದ ಅಂತಿಮ ತೀರ್ಪಿಗೆ ಅನುಗುಣವಾಗಿ, ಖಾಲಿ ಇರುವ ಹುದ್ದೆಗಳಿಗೆ ಅರ್ಹರನ್ನು ಬಡ್ತಿ ಮೂಲಕ ತುಂಬಿಸಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೇಂದ್ರ ಸರ್ಕಾರ ಮನವಿ ಮಾಡಿದೆ.
2020 ಜನವರಿ 31ರವರೆಗೆ ಒಟ್ಟು 78 ಇಲಾಖೆಗಳ ಪೈಕಿ 23 ಇಲಾಖೆಗಳಲ್ಲಿ ಸುಮಾರು 1.3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಬಡ್ತಿಗೆ ತಡೆಯಾಗಿದೆ. ಇದರಿಂದಾಗಿ ಉದ್ಯೋಗಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಅಸಮಾಧಾನಗೊಂಡಿದ್ದಾರೆ ಎಂದು ಕೇಂದ್ರ ಉಲ್ಲೇಖಿಸಿದೆ.
ಸುಪ್ರೀಂ ಕೋರ್ಟ್, 2019 ಏಪ್ರಿಲ್ 15ರಂದು ಬಡ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿತ್ತು. ಈ ಕಾರಣದಿಂದ ಮೀಸಲು ಹಾಗೂ ಸಾಮಾನ್ಯ ವಿಭಾಗದಲ್ಲಿ ಬಡ್ತಿ ಸಂಪೂರ್ಣ ಸ್ಥಗಿತವಾಗಿದೆ.
ಹಲವು ತಿಂಗಳಿಂದ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದು ಸರ್ಕಾರಗಳ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರಲಿದ್ದು, ಜನರಿಗೆ ಇದರಿಂದ ಸಮಸ್ಯೆ ಉಂಟಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹಲವು ಸರ್ಕಾರಿ ನೌಕರರು ಪ್ರತಿ ತಿಂಗಳು ಬಡ್ತಿ ಸಿಗದೇ ನಿವೃತ್ತಿ ಹೊಂದುತ್ತಿದ್ದಾರೆ. ನೌಕರರಲ್ಲಿ ಈ ಕಾರಣದಿಂದಾಗಿ ಅಸಮಾಧಾನ, ಗೊಂದಲ, ಸ್ಥೈರ್ಯ ಕುಗ್ಗಿದೆ. ಕೊರೊನಾದ ಈ ಸಂದರ್ಭ ಸರ್ಕಾರಿ ನೌಕರರು ಜನರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಅವರ ಸ್ಥೈರ್ಯ ಹೆಚ್ಚಿಸುವುದು ಪ್ರಮುಖವಾಗಿದೆ ಎಂದು ಸರ್ಕಾರ ಹೇಳಿದೆ.