ಮುಂಬೈ, ಜೂ.14 (DaijiworldNews/MB) : ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರಿಗೆ ಶನಿವಾರ 30 ವರ್ಷಗಳಾಗಿದ್ದು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 6 ದಿನದ ಅಸುಗೂಸಿನ ಚಿಕಿತ್ಸೆಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ.
6 ದಿನಗಳ ಹಿಂದಷ್ಟೇ ಹುಟ್ಟಿದ ಈ ಮಗು ಹೃದಯ ಬಡಿತದ ತೀವ್ರ ತಗ್ಗುವಿಕೆಯ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ತಿಳಿದ ಯುವಸೇನಾ ಕಾರ್ಯಕರ್ತರಾದ ರಾಹುಲ್ ಕನಾಲ್ ಮತ್ತು ಹುಸೇನ್ ಷಾ ಯುವ ಸೇನಾ ಮುಖ್ಯಸ್ಥರಾಗಿರುವ ಆದಿತ್ಯ ಠಾಕ್ರೆ ಅವರ ಗಮನಕ್ಕೆ ತಂದಿದ್ದಾರೆ. ಆ ಕೂಡಲೇ ಮಗುವಿಗೆ ನೆರವಾಗಲು ಮುಂದಾದ ಆದಿತ್ಯ ಠಾಕ್ರೆ ಮಗುವಿನ ತಂದೆ ಅಬ್ದುಲ್ ಅನ್ಸಾರಿ ಅವರಿಗೆ ಒಂದು ಲಕ್ಷ ರೂಪಾಯಿ ಸಹಾಯ ನೀಡಿದ್ದು ಅಲ್ಲದೆ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಯುವಸೇನಾ ಪದಾಧಿಕಾರಿಗಳು ತಿಳಿಸಿದ್ದಾರೆ.