ಬೆಂಗಳೂರು, ಜೂ.14 (DaijiworldNews/MB) : ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಪದಗ್ರಹಣ ವಹಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಯಾವುದೇ ತೊಂದರೆ ಉಂಟಾಗದಿರಲಿ ಎಂದು ಪ್ರಾರ್ಥಿಸಿ ಭಾನುವಾರ ಬೆಳಗ್ಗೆ ಕೆಪಿಸಿಸಿಯ ನೂತನ ಕಚೇರಿಯ ಸಭಾಂಗಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹೋಮ-ಹವನ ನೇರವೇರುತ್ತಿದೆ.
ಬೆಳಗ್ಗೆ 5 ಗಂಟೆಗೆ ಆರಂಭವಾಗಿರುವ ಹೋಮ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿಯಾಗಲಿದ್ದು ಬಳಿಕ ಡಿಕೆಶಿ ಮತ್ತು ಅವರ ಕುಟುಂಬಸ್ಥರು ಅರುಣಾಚಲೇಶ್ವರನ ದರ್ಶನ ಪಡೆಯಲಿದ್ದು ಇಂದು ಸಂಜೆ 5 ಗಂಟೆಗೆ ತಿರುವಣ್ಣಾಮಲೈಗೆ ತೆರಳಿ ನಾಳೆ ಬೆಳಗ್ಗೆ ಬೆಂಗಳೂರಿಗೆ ವಾಪಾಸ್ ಆಗಮಿಸಲಿದ್ದಾರೆ.
ಇನ್ನು ಹೋಮದ ಕುರಿತಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, 2 ವರ್ಷದಿಂದ ನೂತನ ಕಟ್ಟಡ ಕಾಮಗಾರಿ ಸ್ಥಗಿತವಾಗಿದ್ದು ಈಗ ಪೂರ್ಣವಾಗಿದೆ. ಈ ರಾಜ್ಯಕ್ಕೆ, ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡುತ್ತಿದ್ದು ಎಲ್ಲಾ ವಿಘ್ನಗಳ ನಿವಾರಣೆಗೆ ಶುಭ ಮೂಹೂರ್ತದಲ್ಲಿ ಪೂಜೆ ಆರಂಭಿಸಲಾಗಿದೆ. ರಾಜ್ಯ ಬೇಗನೇ ಕೊರೊನಾದಿಂದ ಮುಕ್ತವಾಗಲಿ ಎಂದು ಹೇಳಿದ್ದು ಇಂದು ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿ ಪದಗ್ರಹಣದ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.