ಧಾರವಾಡ, ಜೂ.14 (DaijiworldNews/MB) : ಸರಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದಲ್ಲಿ ರೈತ ವಿರೋಧಿ ಮತ್ತು ಭೂ ಮಾಫಿಯಾ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರ ಕಾಯ್ದೆಗೆ ತಿದ್ದುಪಡಿ ತರುವ ನಿರ್ಧಾರ ಕೈಗೊಂಡಿರುವುದು ರೈತರಿಗೆ ಮರಣ ಶಾಸನವಾಗಲಿದ್ದು ಇದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಇಳಿ ವಯಸ್ಸಿನಲ್ಲೂ ರೈತ ವಿರೋಧಿ ಎಂಬ ಪಟ್ಟ ಕಟ್ಟಿಕೊಂಡಂತೆ ಆಗುತ್ತದೆ. ರೈತ ಪರ ಹಸಿರು ಶಾಲು ಹಾಕಿಕೊಳ್ಳುವ ಸಿಎಂ ಬಿಎಸ್ವೈ, ಸಚಿವರಾದ ಆರ್.ಅಶೋಕ ಮತ್ತು ಜೆ.ಸಿ. ಮಾಧುಸ್ವಾಮಿಯಂತಹ ಪಟ್ಟಭದ್ರರನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ಬಡ ರೈತರ ರಕ್ಷಣೆ ಮತ್ತು ಕೃಷಿ ಸಂಕಟ ಇನ್ನಷ್ಟು ಹದಗೆಡದಂತೆ ಸರ್ಕಾರ ತನ್ನ ಹೊಣೆಗಾರಿಕೆ ನಿಭಾಯಿಸಿ ರೈತ ವಿರೋಧಿಯಾದ ಈ ತಿದ್ದುಪಡಿಯನ್ನು ಮಾಡಬಾರದು. ಭೂ ಮಾಫಿಯಾಕ್ಕೆ ಅನುಕೂಲವಾಗುವ ಈ ತಿದ್ದುಪಡಿ ಕೈ ಬಿಡಬೇಕು ಎಂದು ಆಗ್ರಹಿಸಿದರು.