ಜಮ್ಮು, ಜೂ.14 (DaijiworldNews/MB) : ಶನಿವಾರ ರಾತ್ರಿ ಪಾಕಿಸ್ತಾನ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಮೂವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಈ ಪೈಕಿ ಒಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದರು.
ಷಹಪುರ್ - ಕರ್ನಿ ಸೆಕ್ಟರ್ ನ ಗಡಿಯುದ್ದಕ್ಕೂ ಶನಿವಾರ ರಾತ್ರಿ ಪಾಕಿಸ್ತಾನ ಸೈನಿಕರು ಗುಂಡು ಹಾಗೂ ಶೆಲ್ ದಾಳಿ ನಡೆಸಿದ್ದಾರೆ. ಭಾರತವೂ ಅದಕ್ಕೆ ಪ್ರತಿಯಾಗಿ ದಾಳಿ ನಡೆಸಿದೆ ಎಂದು ತಿಳಿಸಿದರು.
ರಜೌರಿ ಜಿಲ್ಲೆಯಲ್ಲಿ ಜೂನ್ 4 ರಂದು ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಹವಲ್ದಾರ್ ಪಿ. ಮಥಿಯಾಜಗನ್ ಎಂಬವರು ಹಾಗೂ ಜೂನ್ 10 ರಂದು ನಾಯಕ್ ಗುರುಚರಣ್ ಸಿಂಗ್ ಹುತಾತ್ಮರಾಗಿದ್ದರು.