ನವದೆಹಲಿ, ಜೂ 14 (DaijiworldNews/PY) : ಇದ್ದಕ್ಕಿದ್ದಂತೆ ಗ್ರಹಣ ಶಕ್ತಿ, ವಾಸನೆ, ರುಚಿ ಕಳೆದುಕೊಳ್ಳುವುದೂ ಕೂಡಾ ಕೊರೊನಾ ಸೋಂಕಿನ ಲಕ್ಷಣವಾಗಿರಬಹುದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಗ್ರಹಣ ಶಕ್ತಿ, ವಾಸನೆ, ರುಚಿ ಕಳೆದುಕೊಳ್ಳುವ ಈ ಅಂಶಗಳನ್ನು ಶನಿವಾರ ಕೊರೊನಾ ಲಕ್ಷಣಗಳ ಪಟ್ಟಿಗೆ ಸೇರಿಸಲಾಗಿದೆ. ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಇತ್ಯಾದಿ ತೊಂದರೆಗಳೊಂದಿಗೆ ವಾಸನೆ ಹಾಗೂ ರುಚಿ ಗ್ರಹಣ ನಷ್ಟವಾಗಿರುವ ವಿಚಾರದ ಬಗ್ಗೆಯೂ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳು ಹೇಳಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಎಲ್ಲಾ ವಯಸ್ಸಿನವರ ಮೇಲೆ ಈ ಸೋಂಕು ದುಷ್ಪರಿಣಾಮ ಬೀರಿದೆಯಾದರೂ, ಇದರ ಪರಿಣಾಮ, ಮುಖ್ಯವಾಗಿ 60 ವರ್ಷ ಮೇಲ್ಪಟ್ಟ ಹಿರಿಯರಲ್ಲಿ ಹೆಚ್ಚು. ರೋಗನಿರೋಧಕ ಶಕ್ತಿ ಅವರಲ್ಲಿ ಕಡಿಮೆ ಇರುವುದರಿಂದ ಅವರಿಗೆ ಈ ವೈರಸ್ ಮಾರಣಾಂತಿಕವಾಗಬಲ್ಲದು ಎಂದೂ ಹೇಳಲಾಗಿದೆ.
ಕೊರೊನಾ ಸೋಂಕಿತ ವ್ಯಕ್ತಿ ಸೀನುವಾಗ, ಕೆಮ್ಮುವಾಗ ಅಥವಾ ಮಾತನಾಡುವ ಸಂದರ್ಭ ಹೊರಬರುವ ದ್ರವಾಂಶಗಳಿಂದ ಅಧಿಕ ಸೋಂಕು ಹರಡುವ ಸಾಧ್ಯತೆ ಇದ್ದು, ಪರಿಸರದಲ್ಲಿ ಈ ದ್ರವಾಂಶಗಳಲ್ಲಿರುವ ವೈರಸ್ ಹೆಚ್ಚು ಸಮಯ ಇರಲಿದೆ. ಅದಲ್ಲದೇ, ಈ ವೈರಸ್, ಸೋಂಕಿತ ವ್ಯಕ್ತಿ ದೈಹಿಕ ಸ್ಪರ್ಶ, ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ಸ್ಪರ್ಶಿಸುವುದರಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದಾಗಿ ಸಚಿವಾಲಯ ತಿಳಿಸಿದೆ.