ಮುಂಬೈ, ಜೂ.14 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿರುವ ಸಂದರ್ಭದಲ್ಲಿ ಬಿಜೆಪಿಯು ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಶಿವಸೇನೆಯ ಮುಖವಾಣಿ "ಸಾಮ್ನಾ''ದಲ್ಲಿ ತಮ್ಮ ಸಾಪ್ತಾಹಿಕ ಸಂಪಾದಕೀಯ ಅಂಕಣದಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವತ್ ಈ ಬಗ್ಗೆ ಬರೆದಿದ್ದು ದೇಶವೇ ಕೊರೊನಾ ದವಡೆಯಲ್ಲಿ ಸಿಲುಕಿದೆ ಆದರೆ ಬಿಜೆಪಿ ಮಾತ್ರ ತನ್ನ ಆಡಳಿತವಿಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಪತನ ಮಾಡುವ ಕೀಳು ಮಟ್ಟದ ರಾಜಕೀಯ ಮಾಡುವುದರಲ್ಲೇ ತೊಡಗಿದೆ. ಇತ್ತೇಚೆಗೆ ಪ್ರಧಾನಿ ಮೋದಿಯವರು ಈ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿ ಎಂದು ಹೇಳಿದ್ದು ಬಿಜೆಪಿ ಪಕ್ಷದವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕೊರೊನಾ ಪ್ರಕರಣ ನಿಯಂತ್ರಣದತ್ತ ಗಮನ ಹರಿಸುವ ಬದಲು ಬೇರೆ ಪಕ್ಷದ ಸರ್ಕಾರವನ್ನು ಬೀಳಿಸುವಲ್ಲಿ ಮಗ್ನವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಜಸ್ಥಾನದಲ್ಲಿ ರಾಜ್ಯಸಭಾ ಚುನಾವಣೆಯನ್ನೇ ಅವಕಾಶವಾಗಿ ಬಳಸಿ ಸರ್ಕಾರವನ್ನೇ ಉರುಳಿಸುವ ಯತ್ನ ಮಾಡಿದ್ದು ಗುಜರಾತ್ನಲ್ಲೂ ಈ ಕಾರ್ಯ ನಡೆದಿದೆ. ಮಹಾರಾಷ್ಟ್ರದಲ್ಲೂ ಇಂತಹ ವಿಫಲ ಯತ್ನ ಮಾಡಿದ್ದಾರೆ. ಈಗಾಗಲೇ ಮಧ್ಯಪ್ರದೇಶದ ಕಮಲನಾಥ್ ಸರ್ಕಾರವನ್ನು ಬಿಜೆಪಿ ಉರುಳಿಸಿದೆ. ಈಗ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆ ನೀಡಿತ್ತು. ಆದರೆ ಈಗ ಕೊರೊನಾ ಕಾರಣದಿಂದ ಆ ಭರವಸೆ ಕೂಡಾ ಸುಳ್ಳಾಗಿದೆ. ಸಿಂಧ್ಯಾ ಹಾಗೂ ಅವರ ಬೆಂಬಲಿಗರ ರಾಜಕೀಯ ಭವಿಷ್ಯ ಕತ್ತಲಲ್ಲಿದೆ ಎಂದು ಹೇಳಿದ್ದಾರೆ.
ಹಾಗೆಯೇ ಕೊರೊನಾವಾಗಲಿ ನಿಸರ್ಗ ಚಂಡಮಾರುತವಾಗಲಿ ಇದರಲ್ಲಿ ಉಂಟಾದ ನಷ್ಟಕ್ಕೆ ಕೇಂದ್ರ ಮಹಾರಾಷ್ಟ್ರಕ್ಕೆ ಸರಿಯಾಗಿ ನೆರವು ನೀಡಿಲ್ಲ ಎಂದು ಆರೋಪಿಸಿದರು.