ಶ್ರೀನಗರ, ಜೂ 14 (DaijiworldNews/PY) : ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಜನರು ಸದ್ಯದಲ್ಲಿಯೇ ಭಾರತದೊಳಗೆ ಬರಬೇಕೆಂದು ಕೇಳುತ್ತಾರೆಯೇ ಹೊರತು ಪಾಕಿಸ್ತಾನದ ಆಡಳಿತದ ಅಡಿಯಲ್ಲಿ ಇರಲು ಬಯಸುವುದಿಲ್ಲ. ಇದು ನಡೆದ ಸಂದರ್ಭ ನಮ್ಮ ಸಂಸತ್ತಿನ ಗುರಿ ಹಾಗೂ ಉದ್ದೇಶ ಈಡೇರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಜನ ಸಂವಾದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ನಾಯಕತ್ವದಡಿ ಜಮ್ಮು-ಕಾಶ್ಮೀರದ ಹಣೆಬರಹ ಬದಲಾಗಲಿದ್ದು, ಪ್ರಧಾನಿ ಅವರ ನೇತೃತ್ವದಲ್ಲಿ ಜಮ್ಮು-ಕಾಶ್ಮೀರದ ಅಭಿವೃದ್ದಿಗೆ ತೆಗೆದುಕೊಂಡಿರುವ ಕಠಿಣವಾದ ತೀರ್ಮಾನ ಎಂದು ತಿಳಿಸಿದರು.
ಈ ಹಿಂದೆ ಕಾಶ್ಮೀರದಲ್ಲಿ ಪಾಕಿಸ್ತಾನ ಹಾಗೂ ಐಸಿಸ್ ಬಾವುಟಗಳನ್ನು ತೋರಿಸಿಕೊಂಡು ಕಾಶ್ಮೀರ ಅಜಾದ್ ಎನ್ನುವ ಘೋಷಣೆಗಳನ್ನು ಕೂಗುತ್ತಿರುವುದನ್ನು ನೋಡಿದ್ದೆವು. ಆದರೆ, ಅಲ್ಲಿ ಇಂದು ಭಾರತದ ಭಾವುಟಗಳು ಮಾತ್ರ ಕಾಣುತ್ತವೆ ಎಂದು ಹೇಳಿದರು.
ಚೀನಾದೊಂದಿಗೆ ಗಡಿ ವಿಚಾದಕ್ಕೆ ಸಂಬಂಧಿಸಿಸದಂತೆ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದ ಮಾತುಕತೆ ನಡೆಯುತ್ತಿದ್ದು, ಮಾತುಕತೆಯ ಮೂಲಕ ಬಗೆಹರಿಸಲು ಚೀನಾ ಕೂಡಾ ಒಲವು ತೋರಿದೆ. ರಾಷ್ಟ್ರದ ಗೌರವದ ವಿಚಾರ ಬಂದಾಗ ನಾವು ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದರು.
ಪ್ರಧಾನಿ ಮೋದಿ ಅವರು ಭಾರತದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಕಾಶ್ಮೀರ ವಿವಾದ ವಿಚಾರದಲ್ಲಿ ಈ ಹಿಂದೆ ದೇಶಗಳು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದವು. ಆದರೆ, ಈಗ ಅಂತಹ ವಾತಾವರಣ ಇಲ್ಲ. ದೇಶಗಳು ಭಾರತದ ಪರವಾಗಿವೆ. ಜಗತ್ತಿನಲ್ಲಿ ಭಾರತ ಆಮದು ದೇಶ ಎಂದು ಕರೆಸಿಕೊಳ್ಳದೇ ರಫ್ತು ದೇಶ ಎಂದು ಕರೆಸಿಕೊಳ್ಳಬೇಕು ಎನ್ನುವುದೇ ನಮ್ಮ ಆಸೆ ಎಂದು ತಿಳಿಸಿದರು.