ವಿಶ್ವಸಂಸ್ಥೆ, ಜೂ 14 (DaijiworldNews/PY) : ಜಗತ್ತಿಗೆ ಕೊರೊನಾ ಸಂಬಂಧಪಟ್ಟಂತೆ ಸತ್ಯ ಸಂಗತಿಗಳನ್ನು ತಿಳಿಸಲು 132 ದೇಶಗಳು ಒಟ್ಟಾಗಿ ಆರಂಭಿಸಿರುವ ಉಪಕ್ರಮಕ್ಕೆ ಭಾರತ ಕೈಜೋಡಿಸಿದೆ.
ಈ ಹೋರಾಟಕ್ಕೆ ಇನ್ಫೋಡೆಮಿಕ್ ವಿರುದ್ಧ ಆಸ್ಟ್ರೇಲಿಯಾ, ಚಿಲಿ, ಫ್ರಾನ್ಸ್, ಜಾರ್ಜಿಯಾ, ಇಂಡೊನೇಷ್ಯಾ, ಲೆಬನಾನ್, ನಾರ್ವೆ ಸೇರಿದಂತೆ 132 ದೇಶಗಳು ಮುಂದಾಗಿವೆ. ಈ ದೇಶಗಳು, ಕೊರೊನಾ ವೈರಸ್ನಿಂದ ವ್ಯಾಪಿಸುವ ಸೋಂಕಿನ ಬಗ್ಗೆ ಹಬ್ಬಿಸಲಾಗುತ್ತಿರುವ ತಪ್ಪು, ತಿರುಚಿದ ಮಾಹಿತಿಯ ವಿರುದ್ದ ಜೊತೆಯಾಗಿ ಹೋರಾಡಲು ಮುಂದಾಗಿವೆ. ಇಂತಹ ತಪ್ಪು ಮಾಹಿತಿಯನ್ನು ಇನ್ಫೋಡೆಮಿಕ್ ಅಂದರೆ. ಕೊರೊನಾ ಪಿಡುಗಿನ ಕುರಿತ ತಿರುಚಿದ ಮಾಹಿತಿ ಎಂಬುದಾಗಿ ಹೆಸರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು, ಕೊರೊನಾ ವಿರುದ್ದದ ಹೋರಾಟದೊಂದಿಗೆ ಈ ಪಿಡುಗಿನ ಬಗ್ಗೆ ಮಾಡುತ್ತಿರುವ ತಪ್ಪು ಮಾಹಿತಿ ಪ್ರಚಾರದ ವಿರುದ್ದವೂ ಹೋರಾಟ ಅಗತ್ಯ ಎಂದಿದ್ದಾರೆ.
ಕೆಲವು ದೇಶಗಳಲ್ಲಿ ಕೊರೊನಾ ಪಿಡುಗನ್ನೇ ನೆಪವಾಗಿ ಬಳಸಿಕೊಂಡು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇಂತಹ ದೌರ್ಜನ್ಯ ಹೀಗೆ ಮುಂದುವರೆದಲ್ಲಿ ಆರ್ಥಿಕತೆ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹಾಳಾಗಲಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗದ ಮಹಾ ಕಾರ್ಯದರ್ಶಿ ಮೆಲಿಸ್ಸಾ ಫ್ಲೆಮಿಂಗ್ ತಿಳಿಸಿದ್ದಾರೆ.