ನವದೆಹಲಿ, ಜೂ.14 (DaijiworldNews/MB) : ಕೊರೊನಾ ವೈರಸ್ ಚಿಕಿತ್ಸೆ ನೀಡಲು ದೆಹಲಿಯಲ್ಲಿ ಉಂಟಾಗಿರುವ ಬೆಡ್ಗಳ ಕೊರತೆ ನೀಗಿಸಲು ಕೂಡಲೇ ಕೇಂದ್ರದಿಂದ 500 ರೈಲ್ವೆ ಕೋಚ್ಗಳನ್ನು ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿ, ಕೇಂದ್ರ ಸರ್ಕಾರವು ದೆಹಲಿಯಲ್ಲಿ ಕೊರೊನಾ ನಿಯಂತ್ರಿಸಲು ಬದ್ಧವಾಗಿದ್ದು ಈ ಸಭೆಯಲ್ಲಿ ದೆಹಲಿ ಜನರ ರಕ್ಷಣೆ ಹಾಗೂ ವೈರಸ್ ನಿಯಂತ್ರಣದ ಬಗ್ಗೆ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.ಎರಡು ದಿನದಲ್ಲೇ ದೆಹಲಿಯಲ್ಲಿ ಕೊರೊನಾ ಪರೀಕ್ಷೆ ದ್ವಿಗುಣಗೊಳಿಸಲಾಗುವುದು ಹಾಗೂ ಆರು ದಿನಗಳಲ್ಲಿ ತ್ರಿಗುಣಗೊಳಿಸಲಾಗುವುದು ಎಂದು ಹೇಳಿದರು.
ಹಾಗೆಯೇ ದೆಹಲಿಯ ಸಣ್ಣ ಆಸ್ಪತ್ರೆಗಳಿಗೆ ಕೊರೊನಾ ವೈರಸ್ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗಸೂಚಿ ನೀಡಲು ಸರ್ಕಾರ ಏಮ್ಸ್ನ ಹಿರಿಯ ವೈದ್ಯರ ಸಮಿತಿಯೊಂದನ್ನು ರಚಿಸಿ, ಟೆಲಿಫೋನಿಕ್ ಸಲಹೆಗಳನ್ನು ನೀಡಲಿದೆ. ಇದರ ಸಹಾಯವಾಣಿ ಸಂಖ್ಯೆ ಸೋಮವಾರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಇನ್ನು ಈ ಸಭೆ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಸರಕಾರ ಹಾಗೂ ಕೇಂದ್ರ ಸರಕಾರದ ಜೊತೆಗಿನ ಸಭೆ ಯಶಸ್ವಿಯಾಗಿದ್ದು, ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಲಾಜಿ ಇದ್ದರು.