ಬೆಂಗಳೂರು, ಜೂ 14 (DaijiworldNews/PY) : ಮತ್ತೆ ಲಾಕ್ಡೌನ್ ಆಗುತ್ತದೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಿಎಂ ಬಿಎಸ್ವೈ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಹೊರವಲಯದ ದಾಸರಹಳ್ಳಿಯ ಮೇದರಹಳ್ಳಿಯಲ್ಲಿ ಸುಮಾರು 2 ಸಾವಿರ ಬಡ ಜನರಿಗೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರ ಹಾಗೂ ಡಬ್ಲ್ಯೂಎಚ್ಒನ ನಿರ್ಧಾರದ ಮೇಲೆ ತೀರ್ಮಾನವು ಅವಲಂಭಿತವಾಗಿದ್ದು, ರಾಜ್ಯ ಸರ್ಕಾರವು ಲಾಕ್ಡೌನ್ ಮಾಡಲು ಚಿಂತನೆ ನಡೆಸಿಲ್ಲ. ಅಧಿಕವಾಗಿ ರೋಗ ವ್ಯಾಪಿಸುತ್ತಿರುವ ಕಡೆ ಲಾಕ್ಡೌನ್ ಮಾಡಿದರೆ ತಪ್ಪಾಗಲಾರದು. ಪ್ರಧಾನ ಮಂತ್ರಿ ರಾಜ್ಯದ ಸಿಎಂ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದದು ತಿಳಿಸಿದರು.
ವೈದ್ಯರಿಗೆ, ನರ್ಸ್ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ನೀಡಿರುವ ಬಗ್ಗೆ ತನಿಖೆಯಾಗಲಿದೆ ಎಂದರು.
ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ನಮ್ಮ ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾಗಿರುವವರ ಸಂಖ್ಯೆ ಜಾಸ್ತಿ ಇದೆ. ದೆಹಲಿ ಹಾಗೂ ಮುಂಬೈನಲ್ಲಿ ನಿಯಂತ್ರಣ ತಪ್ಪಿರುವ ಪ್ರದೇಶದಲ್ಲಿ ಲಾಕ್ಡೌನ್ ಮಾಡಿದರೆ ತಪ್ಪಲ್ಲ ಎಂದರು.