ಗೋಕಾಕ, ಜೂ 14 (DaijiworldNews/PY) : ಪಕ್ಷ ನನಗೆ ಕೊಡುಗೆ ನೀಡಿದೆ. ನಾನು ಇದನ್ನು ಬಳಸಿಕೊಂಡು, ಅವಕಾಶ ಸಿಕ್ಕಾಗಲೆಲ್ಲಾ ಹಳ್ಳಿ ಜನರ ಬದುಕು-ಬವಣೆಯನ್ನು ಸರ್ಕಾರದ ಗಮನಕ್ಕೆ ತರುವಂತಹ ಧ್ಯೇಯ ಹೊಂದಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಭಾನುವಾರ ಗೋಕಾಕದ ಶೂನ್ಯ ಸಂಪಾದನಮಠಕ್ಕೆ ಭೇಟಿ ನೀಡಿ ಮುರುಘರಾಜೇಂದ್ರ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯಸಭೆಗೆ ವಿಚಾರವಂತರನ್ನು ಆಯ್ಕೆ ಮಾಡಿ ಕಳುಹಿಸುವುದು ವಾಡಿಕೆ. ಹಾಗಿರುವಾಗ ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಸತ್ತಿನ ಗಮನಕ್ಕೆ ತರಲೆಂದು ಪಕ್ಷವು ನನ್ನನ್ನು ಆಯ್ಕೆ ಮಾಡಿದೆ ಎಂದರು.
ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಭೇಟಿ ಮಾಡಿ ಅವರ ಬೆಂಬಲ ಕೋರಿದ್ದೇನೆ. ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದರ್ಭ ರಮೇಶ ಜಾರಕಿಹೊಳಿ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದೆ. ಟಿಕೆಟ್ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದರು ಎಂದು ತಿಳಿಸಿದರು.