ಬೆಂಗಳೂರು, ಜೂ.15 (DaijiworldNews/MB) : ಸೋಂಕು ಹರಡದಂತೆ ತಡೆಯುವಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಶಹಬ್ಬಾಸ್ಗಿರಿ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಭಾನುವಾರ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕ ಜನ ಸಂವಾದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹರಡುವುದನ್ನು ತಡೆಯುವ ಪ್ರಯತ್ನ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರ ಮಾಡುತ್ತಿದ್ದು ಏತನ್ಮಧ್ಯೆ ಬಿಎಸ್ವೈ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ನಾಲ್ಕು ಟಿ ಸೂತ್ರ ಮೂಲಕ ರಾಜ್ಯ ಹಾಗೂ ರಾಜಧಾನಿಯಲ್ಲಿ ಸೋಂಕು ತಡೆಯುವ ಕಾರ್ಯ ಮಾಡಲಾಗಿದೆ ಎಂದು ಸಿಎಂ ಬಿಎಸ್ವೈ ಅವರನನ್ನು ಹೊಗಳಿದರು.
ಅಷ್ಟು ಮಾತ್ರವಲ್ಲದೆ ವಲಸೆ ಕಾರ್ಮಿಕರಿಗೂ ನೆರವಾಗಲು ಸಹಾಯವಾಣಿ ಸ್ಥಾಪಿಸಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಮೋದಿಯವರ ಮಾದರಿಯಲ್ಲೇ ಯಡಿಯೂರಪ್ಪನವರು ಆರ್ಥಿಕ ನೆರವು, ದಿನಸಿ, ಆಹಾರದ ಪ್ಯಾಕೆಟ್ಗಳನ್ನು ನೀಡಿದ್ದಾರೆ. ವಲಸೆ ಕಾರ್ಮಿಕರಿಗೆ ನೆರವಾಗಲು ಸಹಾಯವಾಣಿಗೆ ಕಷ್ಟದಲ್ಲಿರುವವವರು ಕರೆ ಮಾಡಿದರೆ ವ್ಯಕ್ತಿ ಇದ್ದ ಸ್ಥಳಕ್ಕೆಯೇ ಊಟ ಪೂರೈಸುವ ಕಾರ್ಯ ಮಾಡಿದ್ದಾರೆ. ಈ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲೂ ಯಡಿಯೂರಪ್ಪನವರು ಬಡ, ಮಧ್ಯಮವರ್ಗ ಹಾಗೂ ಕಾರ್ಮಿಕರಿಗಾಗಿ ರೂ.2100 ಕೋಟಿಗಳ ಪರಿಹಾರದ ಪ್ಯಾಕೇಜನ್ನು ಘೋಷಿಸಿದ್ದಾರೆ. ಹಲವು ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.