ತಿರುವನಂತಪುರ, ಜೂ 15 (Daijiworld News/MSP): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರು ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಜ್ ಅವರ ಕೈ ಹಿಡಿದಿದ್ದು ಇಂದು ಸಿಎಂ ಪಿಣರಾಯಿ ಅವರ ಅಧಿಕೃತ ನಿವಾಸದಲ್ಲಿ ಸರಳವಾಗಿ ವಿವಾಹ ನೆರವೇರಿದೆ.
ಎರಡೂ ಕುಟುಂಬಗಳ ಆಪ್ತ ಸುಮಾರು 50 ಸದಸ್ಯರ ಸಮ್ಮುಖದಲ್ಲಿ ರಿಜಿಸ್ಟರ್ ವಿವಾಹವಾಗುವುದರ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ.
ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹವಾಗಿದ್ದು, ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಇಬ್ಬರೂ ವಿಚ್ಛೇದಿತರಾಗಿದ್ದಾರೆ. ರಿಯಾಜ್ ಅವರಿಗೆ 2002ರಲ್ಲಿ ಮದುವೆಯಾಗಿತ್ತು. ಅದಾದ ಮೂರೇ ವರ್ಷದಲ್ಲಿ ಅವರು ವಿಚ್ಛೇದನ ಪಡೆದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ವೀಣಾ ಕೂಡ ಮೂರು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದು, ಅವರಿಗೆ ಒಂದು ಮಗುವಿದೆ.
ಕೇರಳ ಸಿಎಂ ಮಗಳು ವೀಣಾ ಬೆಂಗಳೂರಿನ ಐಟಿ ಉದ್ಯಮಿಯಾಗಿದ್ದಾರೆ. ರಿಯಾಜ್ 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.