ಭೋಪಾಲ್, ಜೂ.15 (DaijiworldNews/MB) : ಸಾಮಾಜಿಕ ಜಾಲತಾಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಬಗ್ಗೆ ತಿರುಚಿದ ವಿಡಿಯೊವೊಂದನ್ನು ಶೇರ್ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಭೋಪಾಲ್ ಪೊಲೀಸರ ಅಪರಾಧ ದಳ ಎಫ್ಐಆರ್ ದಾಖಲಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭೋಪಾಲ್ ಡಿಐಜಿ ಇರ್ಷಾದ್ ವಾಲಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೇ ವಿಡಿಯೊವೊಂದನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮುಖ್ಯಮಂತ್ರಿಗಳ ಘನತೆಗೆ ಧಕ್ಕೆ ತರುವ ಯತ್ನ ಮಾಡಲಾಗಿದ್ದು ಸೈಬರ್ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
2.19 ನಿಮಿಷ ಅವಧಿಯ ವಿಡಿಯೊವೊಂದನ್ನು ತಿರುಚಿ ಅದರ 9 ಸೆಕೆಂಡುಗಳನ್ನು ಮಾತ್ರ ದಿಗ್ವಿಜಯ್ ಸಿಂಗ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಗಳ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ದೂರಿದ್ದು ಅವರ ವಿರುದ್ಧ ದೂರು ದಾಖಲಿಸಿದೆ.
ಈ 9 ಸೆಕೆಂಡುಗಳ ವಿಡಿಯೋದಲ್ಲಿ ಮದ್ಯ ಎಷ್ಟು ನೀಡಬೇಕೆಂದರೆ ಕುಡಿದು ಉಳಿಯುವಷ್ಟು ನೀಡಿ ಎಂದು ಹೇಳಲಾಗಿದ್ದು ಈ ವಿಡಿಯೋ ದಿಗ್ವಿಜಯ್ ಸಿಂಗ್ ಶೇರ್ ಮಾಡಿದ ಬಳಿಕ ವೈರಲ್ ಆಗಿದ್ದು ಅದರ ನಿಜವಾದ ವಿಡಿಯೊ ತುಣುಕನ್ನು ಚೌಹಾಣ್ ಟ್ವೀಟ್ ಮಾಡಿದ್ದರು.