ಚಾಮರಾಜನಗರ, ಜೂ 15 (DaijiworldNews/PY) : ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಬಾವಿಗೆ ತಳ್ಳಿ ಹತ್ಯೆ ಮಾಡಿ, ಬಳಿಕ ಶವವನ್ನು ಹೂತಿಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು, ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಹತ್ಯೆಯಾದ ಮಹಿಳೆಯನ್ನು ಚಾಮರಾಜನಗರ ಪಟ್ಟಣದ ಹಾಜಿರಾಬಾನು ಎನ್ನಲಾಗಿದೆ. ಹತ್ಯೆಗೈದ ವ್ಯಕ್ತಿಯನ್ನು ಹಾಜಿರಬಾನು ಪತಿ ನಾಗವಳ್ಳಿ ಗ್ರಾಮದ ಅಬ್ದುಲ್ ಹಬೀಬ್ ಎನ್ನಲಾಗಿದೆ. ಹಾಜಿರಾಬಾನು ತಾತನ ಮನೆಗೆ ಬಂದ ಸಂದರ್ಭ ತಂದೆ ಮಾಡಿದ ಕೃತ್ಯವನ್ನು ಬಯಲು ಮಾಡಿದ್ದಾರೆ.
ಹಾಜಿರಾಬಾನು ಮಾಟ ಮಾಡಿಸುತ್ತಾಳೆ ಎಂದು ಆಕೆಯ ಪತಿ ಅಬ್ದುಲ್ ಮನೆಯವರಿಗೆ ಸಂಶಯವಾಗಿತ್ತು. ಅಲ್ಲದೇ ಅವರಿಗೆ ಹಾಜಿರಾಬಾನು ಅವರೊಂದಿಗೆ ಅಷ್ಟೇನು ಮಾತನಾಡುತ್ತಿರಲಿಲ್ಲ. ಈ ಕಾರಣದಿಂದ ಹಾಜಿರಾಬಾನು ಪತಿ ಅಬ್ದುಲ್ ಎಪ್ರಿಲ್ 20ರಂದು ತನ್ನ ಪತ್ನಿ ಹಾಜಿರಾಬಾನು ಅವರನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾರೆ. ಬಳಿಕ ಯಾರಿಗೂ ತಿಳಿಯದಂತೆ ಮೃತದೇಹವನ್ನು ಹೂತು ಹಾಕಿದ್ದಾರೆ.
ಮೃತ ಹಾಜಿರಾಬಾನು ಮಕ್ಕಳು ಚಾಮರಾಜನಗರದಲ್ಲಿರುವ ತಾತಾನ ಮನೆಗೆ ಬಂದ ಸಂದರ್ಭ ತಾಯಿಯನ್ನು ಹತ್ಯೆ ಮಾಡಿ ಹೂತಿಟ್ಟಿರುವ ವಿಚಾರವನ್ನು ತಿಳಿಸಿದ್ದಾರೆ. ಈ ಹಿನ್ನೆಲೆ ಮೃತ ಹಾಜಿರಾಬಾನು ಪೋಷಕರು ಚಾಮರಾಜನಗರ ಪೂರ್ವ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೂತಿಟ್ಟಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಆರೋಪಿ ಅಬ್ದುಲ್ ಹಬೀಬ್ರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. ಇದರೊಂದಿಗೆ ಆರೋಪಿಯ ತಾಯಿ, ಸಹೋದರ, ಸಹೋದರಿಯರು ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.