ನವದೆಹಲಿ, ಜೂ.15 (DaijiworldNews/MB) : ''ನೇಪಾಳಕ್ಕೆ ಇರುವ ತಪ್ಪು ತಿಳುವಳಿಕೆಯನ್ನು ಮಾತುಕತೆ ಮೂಲಕವೇ ಸರಿಪಡಿಸಿಕೊಳ್ಳಬಹುದು'' ಎಂದು ಕೇಂದ್ರ ಸರ್ಕಾರ ಭಾವಿಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದರು.
ಈ ಬಗ್ಗೆ ಉತ್ತರಾಖಂಡದಲ್ಲಿನ ರ್ಯಾಲಿಯನ್ನು ವಿಡಿಯೊ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ''ಭಾರತವು ಲಿಪುಲೇಶ್ ಪಾಸ್ವರೆಗೆ ನಿರ್ಮಾಣ ಮಾಡಿರುವ ರಸ್ತೆ ದೇಶದ ಗಡಿಯ ವ್ಯಾಪ್ತಿಯ ಒಳಗಡೆಯೇ ಬರುತ್ತದೆ. ಇದನ್ನು ಮಾತುಕತೆ ಮೂಲಕವೇ ಸರಿಮಾಡಬಹುದು. ಭಾರತದ ಜನರು ನೇಪಾಳದ ಬಗ್ಗೆ ಕೆಟ್ಟ ಭಾವನೆ ಹೊಂದಲು ಸಾಧ್ಯವಿಲ್ಲ'' ಎಂದರು.
''ಭಾರತ ಹಾಗೂ ನೇಪಾಳದ ಸಂಬಂಧವನ್ನು ಪ್ರಪಂಚದ ಯಾವ ಶಕ್ತಿಯಿಂದಲೂ ಮುರಿಯಲು ಸಾಧ್ಯವಿಲ್ಲ. ನಮ್ಮದು ರೋಟಿ– ಬೇಟಿ ಬಾಂಧವ್ಯ. ನಮ್ಮ ಬಾಂಧವ್ಯ ಐತಿಹಾಸಿಕ, ಸಾಂಸ್ಕೃತಿಕ ಮಾತ್ರವಲ್ಲದೇ ಆಧ್ಯಾತ್ಮಕ ಬಾಂಧವ್ಯವೂ ಇದೆ. ಇದನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ'' ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ''ಭಾರತ ನೇಪಾಳದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಹೇಗೆ ಸಾಧ್ಯ?'' ಎಂದು ಕೂಡಾ ಪ್ರಶ್ನಿಸಿದರು.
ಇತ್ತೀಚೆಗೆ ನೇಪಾಳದ ಸಂಸತ್ತಿನಲ್ಲಿ ಭಾರತದ ಭೂಪ್ರದೇಶಗಳನ್ನು ಹೊಂದಿರುವ ರಾಜಕೀಯ ಭೂಪಟದ ಪರಿಷ್ಕರಣೆಗೆ ಅಗತ್ಯವಾಗಿರುವ ಸಾಂವಿಧಾನಿಕ ತಿದ್ದುಪಡಿಗೆ ಅನುಮೋದನೆ ನೀಡಿತ್ತು