ಬೆಂಗಳೂರು, ಜೂ.15 (DaijiworldNews/MB) : ಸಮಾಜ ಕಲ್ಯಾಣ ಇಲಾಖೆ ನಡೆಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಇರುವ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸುವುದರೊಂದಿಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನವಿರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ರಾಜ್ಯದಲ್ಲಿ ಅಧಿಕ ಶಾಲೆಗಳು ಇರುವ ಕಾರಣ ಸಮಾಜ ಕಲ್ಯಾಣ ಇಲಾಖೆ ನಡೆಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಇರುವ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿ. ಇಲಾಖೆಯ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಕಾರ್ಯಾರಂಭ ಮಾಡಲಿದೆ. ಈ ವೇಳೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಕ್ರೈಸ್ ವಸತಿ ಶಾಲೆಗಳಲ್ಲಿ 660 ಶಿಕ್ಷಕರು ಮತ್ತು 183 ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು 993 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಾಗೆಯೇ ಇಲಾಖೆಯ ವಸತಿ ಶಾಲೆಗಳು ಹಾಗೂ ಹಾಸ್ಟೆಲ್ಗಳಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ 42 ಸಾವಿರಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದರು.