ದಾವಣಗೆರೆ, ಜೂ.15 (DaijiworldNews/MB) : ನನ್ನ ಪುತ್ರನ ವಿವಾಹಕ್ಕೆ ಕಡಿಮೆ ಜನ ಬನ್ನಿ ಎಂದು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಮಾಡಿ ಮನವಿ ಮಾಡಿದ್ದೆ. ಆದರೆ ಜನರು ನನ್ನ ಮೇಲಿನ ಪ್ರೀತಿಯಿಂದ ಪುತ್ರನ ವಿವಾಹಕ್ಕೆ ಹೆಚ್ಚು ಜನ ಬಂದ್ರು ಎಂದು ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ತಿಳಿಸಿದ್ದಾರೆ.
ಮದುವೆ ಸಂದರ್ಭ ಕಾನೂನು ಉಲ್ಲಂಘನೆಗೆ ಸಂಬಂಧಿಸಿ ವರದಿಗಾರರೊಂದಿಗೆ ಮಾತನಾಡಿದ ಅವರು, ಬಂದ ಎಲ್ಲರ ಮಾಸ್ಕ್ ಸ್ಯಾನಿಟೈಜರ್ ನೀಡಿ ಥರ್ಮಲ್ ಸ್ಕಾನಿಂಗ್ ಮಾಡಲು ಹೇಳಿದ್ದೆ. ಆದರೆ ಹೆಚ್ಚು ಜನರು ಬಂದ ಕಾರಣ ಇದು ಸಾಧ್ಯವಾಗಿಲ್ಲ. ಈ ಕೊರೊನಾ ಸಂದರ್ಭದಲ್ಲಿ ಹೆಚ್ಚು ಜನರು ಬರಬಾರದು ಎಂದು ವಿನಂತಿಸಿದ್ದೆ. ಆದರೂ ಬಂದಿದ್ದಾರೆ. ಹಾಗೇ ಬಂದವರನ್ನು ಬರಬೇಡಿ ಎಂದು ತಡೆಯಲು ಆಗುತ್ತಾ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲದ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸಿದ ಮಾಜಿ ಸಚಿವರು, ನನಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಯಾರ ಬಗೆಯೂ ನಾನು ಏನು ಹೇಳುವುದಿಲ್ಲ. ಯಾರ ಮೇಲೆಯೂ ಆರೋಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ವಿವಾಹ ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ಅದ್ದೂರಿಯಾಗಿ ನಡೆದಿದ್ದು ಈ ವಿವಾಹಕ್ಕೆ ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ನೂರಾರು ಜನರು ಭಾಗಿಯಾಗಿದ್ದರು. ಈ ವಿವಾಹದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಕೂಡಾ ಭಾಗಿಯಾಗಿದ್ದಾರೆ.
ಇನ್ನು ವಿವಾಹದಲ್ಲಿ 50 ಕ್ಕೂ ಅಧಿಕ ಜನರು ಭಾಗಿಯಾಗಬಾರದು ಎಂಬ ಕೋವಿಡ್ ಎಸ್ಒಪಿ ನಿಯಮವಿದ್ದರೂ ಕೂಡಾ ಪಿ.ಟಿ.ಪರಮೇಶ್ವರ ನಾಯ್ಕ್ ಮಗನ ಮದುವೆಯಲ್ಲಿ ನಿಯಮ ಉಲ್ಲಂಘಿಸಿದ ಕಾರಣದಿಂದಾಗಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.