ಭುವನೇಶ್ವರ, ಜೂ 15 (DaijiworldNews/PY) : ಅನಾರೋಗ್ಯ ಪೀಡಿತ ತಾಯಿಯನ್ನು ಪಿಂಚಣಿ ಹಣಕ್ಕಾಗಿ ಮಂಚದ ಸಮೇತ ಎಳೆದುಕೊಂಡು ಬಂದ ಘಟನೆ ಒಡಿಶಾದ ನುವಾಪಾದ ಜಿಲ್ಲೆಯ ಬರಗನ್ ಗ್ರಾಮದಲ್ಲಿ ನಡೆದಿದೆ.
ಗುಂಜಾ ದೇವಿ (70) ವರ್ಷದ ಮಹಿಳೆಯು ತನ್ನ ತಾಯಿ ಲಾಭ್ ಭಾಗೆಲ್ (120) ಅವರನ್ನು ಪಿಂಚಣೆ ಹಣವನ್ನು ಪಡೆಯುವುದಕ್ಕಾಗಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಅಧಿಕಾರಿಗಳು ಖುದ್ದಾಗಿ ಪಿಂಚಣಿ ಹಕ್ಕುದಾರ ಮಹಿಳೆ ಹಾಜರಾಗದಿದ್ದರೆ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಧಿಕಾರಿಗಳ ಮಾತಿಗೆ ಕಂಗಾಲಾದ ಮಹಿಳೆ ಹಾಸಿಗೆ ಹಿಡಿದಿರುವ ತಾಯಿಯನ್ನು ಮಂಚದಲ್ಲೇ ಬ್ಯಾಂಕ್ಗೆ ಎಳೆದು ತಂದಿದ್ದಾರೆ. ಲಾಭ್ ಭಾಗೆಲ್ ಅವರು ತನ್ನ ಜನ್ ಧನ್ ಖಾತೆಯಿಂದ 500 ರೂ. ತೆಗೆಯಲು ಅವರ ಮಗಳು ಗುಂಜಾ ದೇವಿ ಅವರಲ್ಲಿ ಹೇಳಿದ್ದರು. ಹಾಗಾಗಿ ಗುಂಜಾ ದೇವಿ ಅವರು ಪಿಂಚಣಿ ಪಡೆಯಲು ಬ್ಯಾಂಕ್ಗೆ ತೆರಳಿದ್ದ ಸಂದರ್ಭ ಬ್ಯಾಂಕ್ ಅಧಿಕಾರಿಗಳು ಪಿಂಚಣಿ ನೀಡಲು ನಿರಾಕರಿಸಿದ್ದರು. ಅಲ್ಲದೇ ಖುದ್ದಾಗಿ ಲಾಭ್ ಭಾಗೆಲ್ ಅವರನ್ನು ಹಾಜರಾಗುವಂತೆ ಹೇಳಿದ್ದರು. ಹಾಗಾಗಿ ಮಹಿಳೆ ತನ್ನ ತಾಯಿಯನ್ನು ಮಂಚದ ಸಮೇತ ಬ್ಯಾಂಕ್ಗೆ ಕರೆತಂದದ್ದು, ಅಧಿಕಾರಿಗಳು ಕೊನೆಗೆ ಹಣ ನೀಡಿದ್ದಾರೆ.
ನುವಾಪಾದ ಶಾಸಕ ರಾಜು ದೊಲ್ಕಿಯಾ ಅವರು ಈ ಘಟನೆಯ ಬಗ್ಗೆ ಪ್ರತೊಕ್ರಿಯೆ ನೀಡಿದ್ದು, ಈ ಅಮಾನವೀಯ ಘಟನೆಯನ್ನು ಖಂಡಿಸುತ್ತೇನೆ. ಈ ಬಗ್ಗೆ ತಕ್ಷಣವೇ ಸರ್ಕಾರಕ್ಕೆ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.