ಮಧ್ಯಪ್ರದೇಶ, ಜೂ 16 (Daijiworld News/MSP): ಕೊರೊನಾ ವೈರಸ್ ವಿರುದ್ಧ ಇತರ ಮುನ್ನೆಚ್ಚರಿಕೆ ಕ್ರಮಗಳ ನಡುವೆ ಕೇಂದ್ರದ ಮಾರ್ಗಸೂಚಿಗಳ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಮಾಸ್ಕ್ ಬಳಕೆ ಕಡ್ಡಾಯದ ನಿಯಮವನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯಪ್ರದೇಶದ ಬಟ್ಟೆ ಅಂಗಡಿ ಮಾಲೀಕ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ರಾಜಕೀಯ ಮುಖಂಡರ ಭಾವಚಿತ್ರದ ಮುಖಗವಸು ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ಅಂಗಡಿ ಮಾಲೀಕ ಕುನಾಲ್ ಪರಿಯಾನಿ "ನಮ್ಮಲ್ಲಿ ಹಲವು ರಾಜಕೀಯ ಮುಖಂಡರ ಮಾಸ್ಕ್ ಗಳು ಇವೆ, ಇದರಲ್ಲೂ ಮೋದಿ ಮಾಸ್ಕ್ ಗೆ ಬಹಳ ಬೇಡಿಕೆ ಇದ್ದು ನಾನು ಇಲ್ಲಿಯವರೆಗೆ ಸುಮಾರು 500 ರಿಂದ1000 ಮೋದಿ ಮುಖವಾಡಗಳನ್ನು ಮಾರಾಟ ಮಾಡಿದ್ದೇನೆ" ಎಂದು ಹೇಳುತ್ತಾರೆ.
ಇದಲ್ಲದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ , ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಕಮಲ್ ನಾಥ್ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಸ್ಕ್ ಗಳಿಗೂ ಬಹು ಬೇಡಿಕೆ ಇದ್ದು ಇತರ ಮುಖಂಡರ ಮುಖವಸ್ತ್ರಗಳು ನಮ್ಮಲ್ಲಿದೆ . ಆದ್ರೆ ಎಲ್ಲಾ ಪೈಕಿ ಅತಿ ಹೆಚ್ಚು ಮಾರಾಟವಾಗಿದ್ದು ಮೋದಿ ಮಾಸ್ಕ್ ಎನ್ನುತ್ತಾರೆ ಕುನಾಲ್ ಪರಿಯಾನಿ.
ಮದ್ಯಪ್ರದೇಶದಲ್ಲಿ ಸುಮಾರು 11,000 ಕೊರೊನಾ ಪ್ರಕರಣ ಮತ್ತು 465 ಸಾವುಗಳು ಸಂಭವಿಸಿದ್ದು, ಸುಮಾರು ಎರಡು ತಿಂಗಳ ಲಾಕ್ಡೌನ್ ನಂತರ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ, ಮಾಸ್ಕ್ ಬಳಕೆ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳ ಬಳಕೆ ಕಡ್ಡಾಯವಾಗಿದ್ದರೂ, ಬ್ಯಾಂಕುಗಳು ಮತ್ತು ಆಭರಣ ಅಂಗಡಿಗಳಿಗೆ ಭೇಟಿ ನೀಡುವವರಿಗೆ ಭದ್ರತಾ ಉದ್ದೇಶಗಳಿಗಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವಂತೆ 30 ಸೆಕೆಂಡುಗಳ ಕಾಲ ತಮ್ಮ ಮುಖಗವಸು ತೆಗೆಯುವಂತೆ ಮದ್ಯಪ್ರದೇಶದ ಪೊಲೀಸರು ವಿನಂತಿಸಿಕೊಂಡಿದ್ದಾರೆ.