ಚಿಕ್ಕೋಡಿ, ಜೂ.16 (DaijiworldNews/MB) : ಬಿಜೆಪಿ ಪಕ್ಷದಲ್ಲಿಯೇ ನನ್ನ ರಾಜಕೀಯ ಜೀವನದ ಅಂತ್ಯ ಎಂದು ಹೇಳುವ ಮೂಲಕ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಪಕ್ಷದಿಂದ ಹಿರ ಬರುತ್ತಾರೆ ಎಂಬ ವದಂತಿಗಳಿಗೆ ಸಚಿವರು ತೆರೆ ಎಳೆದಿದ್ದಾರೆ.
ಈ ಬಗ್ಗೆ ಚಿಕ್ಕೋಡಿ ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ ಅಂತ್ಯದವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಿಂದ ಹೊರ ಬರುವ ಪ್ರಶ್ನೆಯೇ ಇಲ್ಲ. ಸಂಘ ಪರಿವಾರದಲ್ಲಿ ನನಗೆ ದೊರೆಯುತ್ತಿರುವ ಆಶೀರ್ವಾದವನ್ನು ನೋಡಲಾಗದ ಕೆಲವರು ವೈರಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಬದಲಾಗುತ್ತಾರೆ ಎಂಬುದು ಸತ್ಯವಲ್ಲ. ಅವರು ಈ ದೇಶದಲ್ಲಿ ಯುವಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಬದಲಾವಣೆ ಮಾಡುವ ವಿಚಾರವೇ ಇಲ್ಲ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನ ನೀಡದ ಕುರಿತಾಗಿ ಮಾತನಾಡಿದ ಅವರು, ನಾನು ರಾಜಕೀಯ ಜೀವನದ 20 ವರ್ಷಗಳ ಬಳಿಕ ಮಂತ್ರಿಯಾಗಿದ್ದು ಅದು ಹಣೆಯಲ್ಲಿ ಬರೆದಿರಬೇಕು. ಹಿರಿಯರಾಗಿರುವ ಉಮೇಶ್ ಕತ್ತಿಯವರಿಗೆ ಮಂತ್ರಿಗಿಂತ ಹೆಚ್ಚಿನ ಪವರ್ ಇದೆ ಎಂದು ಹೇಳಿದ್ದು ಉಮೇಶ್ ಕತ್ತಿಯವರನ್ನು ಮುಖ್ಯಮಂತ್ರಿ ಮಾಡಿದರೆ ಅವರಿಗೆ ಬೆಂಬಲ ನೀಡುತ್ತೀರಾ ಎಂದು ವರದಿಗಾರರು ಪ್ರಶ್ನಿಸಿದಾಗ, ನಾನು ಯಡಿಯೂರಪ್ಪನವರ ಬೆಂಬಲ ಎಂದು ಹೇಳಿದ್ದಾರೆ.