ಚೆನ್ನೈ, ಜೂ.17 (DaijiworldNews/MB) : ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದ ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ ಚೀನಾ ಭಾರತ ಸಂಘರ್ಷದಲ್ಲಿ ಹುತಾತ್ಮರಾದ ಹುತಾತ್ಮರಾದ ಯೋಧರ ಪೈಕಿ ತಮಿಳುನಾಡಿನ ಹವಾಲ್ದಾರ್ ಪಳನಿ ಕೂಡ ಒಬ್ಬರಾಗಿದ್ದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹುತಾತ್ಮ ಯೋಧ ಪಳನಿ ಅವರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ೨೦ ಲಕ್ಷ ಪರಿಹಾರ ಘೋಷಿಸಿದ್ದು ಕುಟುಂಬದ ಒಬ್ಬರಿಗೆ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.
ಹುತಾತ್ಮ ಯೋಧ ಪಳನಿ ಅವರು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದವರಾಗಿದ್ದು 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಇನ್ನು ಹುತಾತ್ಮ ಯೋಧ ಪಳನಿ ಅವರ ಮಾವ ನಾಚಿಯಪ್ಪನ್ ಅವರು, ನಮಗೆ ರಾಜಸ್ಥಾನದ ಸೇನಾ ಅಧಿಕಾರಿಯೊಬ್ಬರು ಕರೆ ಮಾಡಿ ಈ ವಿಷಯ ತಿಳಿಸಿದರು. ಪಳನಿ ಈ ವರ್ಷದ ಜನವರಿಯಲ್ಲಿ ನಮ್ಮ ಊರಿನ ಈ ಮನೆಗೆ ಬಂದಿದ್ದರು. ಕುಟುಂಬ ಅವರ ಆದಾಯದ ಮೇಲೆ ಅವಲಂಬಿಸಿದೆ. ಮೃತರ ಪತ್ನಿ ರಾಮನಾಥಪುರಂ ಜಿಲ್ಲೆಯ ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.