ನವದೆಹಲಿ, ಜೂ 17 (DaijiworldNews/PY) : ಚೀನಾ ಗಡಿಯಲ್ಲಿ ಉದ್ದಟತನ ಪ್ರದರ್ಶಿಸಿದ್ದು, ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ. ನಮ್ಮ ದೌರ್ಬಲ್ಯ ವ್ಯಕ್ತವಾದಷ್ಟು ಚೀನಾದ ಪ್ರತಿಕ್ರಿಯೆ ಹೆಚ್ಚು ಆಕ್ರಮಣಕಾರಿಯಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿ 20 ಯೋಧರನ್ನು ಬಲಿ ಪಡೆದ ಚೀನಾ ಸೈನಿಕರ ಕೃತ್ಯವನ್ನು ಖಂಡಿಸಿದ ಅವರು, ನಮ್ಮ ಸೈನಿಕರು ಗಡಿ ಭಾಗವನ್ನು ರಕ್ಷಿಸಿಕೊಳ್ಳುವಲ್ಲಿ ಕಾರ್ಯದಲ್ಲಿ ಆಗಾಗ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತೀಯ ಯೋಧರು ಗಡಿಯಲ್ಲಿ ಅಧರ್ಮ ಯುದ್ದವನ್ನು ಎದುರಿಸುತ್ತಿದ್ದಾರೆ. ಇಡೀ ದೇಶವೇ ಇದೀಗ ಗಡಿ ಉಲ್ಲಂಘನೆಯ ಎದುರು ಸೆಟೆದು ನಿಲ್ಲಬೇಕಾದಂತಹ ಸಮಯ ಎದುರಾಗಿದೆ ಎಂದಿದ್ದಾರೆ.