ಬೆಂಗಳೂರು, ಜೂ 17 (DaijiworldNews/PY) : ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ದ ಸಿಡಿದೆದ್ದಿರುವ ಗುತ್ತಿಗೆ ವೈದ್ಯರು ತಮ್ಮ ಕೆಲಸಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಖಾಯಂ ವೈದ್ಯರಿಗೆ ಸರ್ಕಾರದ ಸಂಬಳ 80,000 ರೂಪಾಯಿ ಇದೆ. ಆದರೆ, ಕೊರೊನಾ ಬಿಕ್ಕಟ್ಟಿನ ಈ ಸಂದರ್ಭ ಸರ್ಕಾರವು ವೈದ್ಯರಿಗೆ 60,000 ರೂಪಾಯಿ ಘೋಷಣೆ ಮಾಡಿದೆ. 3-7 ವರ್ಷದವರೆಗೆ ಗುತ್ತಿಗೆ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಇನ್ನೂ ಕೆಲಸವನ್ನು ಖಾಯಂ ಮಾಡಿಲ್ಲ. ಹಾಗಾಗಿ ಕೊರೊನಾ ಹೋರಾಟದ ಕರ್ತವ್ಯದಿಂದ ಸುಮಾರು 507 ಗುತ್ತಿಗೆ ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸಿಎಂ ಬಿಎಸ್ವೈ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರನ್ನು ಹಲವಾರು ಭಾರಿ ಭೇಟಿ ಮಾಡಿದ್ದು, ಮನವಿ ಕೂಡಾ ಮಾಡಿದ್ದೇವೆ. ಆದರೆ, ಯಾವುದೇ ಭರವಸೆ ದೊರಕಿಲ್ಲ. ರಾಜ್ಯದ ವಿವಿಧ ಕಡೆಗಳಲ್ಲಿ ಗುತ್ತಿಗೆ ವೈದ್ಯರು ಕಳೆದ ಕಳೆದ 3 ವಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸೇವಾವಧಿಯನ್ನು ಖಾಯಂ ಮಾಡಲು ಹಾಗೂ ವೇತನ ಪರಿಷ್ಕರಣೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು. ಸರ್ಕಾರ ವೈದ್ಯರಿಗೆ ಈಗ 45,000 ಸಂಬಳ ನೀಡುತ್ತಿದೆ.
ಈ ವಿಚಾರದ ಬಗ್ಗೆ ಸಿಎಂ ಬಿಎಸ್ವೈ ಹಾಗೂ ಸಚಿವ ಶ್ರೀರಾಮುಲು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರನ್ನು ಗುತ್ತಿಗೆ ವೈದ್ಯರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದ್ದು, ಬೇಡಿಕೆ ಸಲ್ಲಿಸಿದ್ದರು. ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರ ಕೆಲಸವನ್ನು ಖಾಯಂ ಮಾಡಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂ ಮಾಡಿದೆ. ಸರ್ಕಾರವು ಹಳ್ಳಿಗೆ ಹೋಗಿ ಎಂದು ಹೇಳುತ್ತಿದೆ. ಆದರೆ, ಸಮಾನವಾದ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ ಎಂದು ಗುತ್ತಿಗೆ ವೈದ್ಯರು ಬೇಸರ ಹೊರಹಾಕಿದ್ದಾರೆ.