ಬೆಂಗಳೂರು, ಜೂ 17 (DaijiworldNews/PY) : ಸುಗ್ರೀವಾಜ್ಞೆ ಮೂಲಕ 10 ದಿನಗಳಲ್ಲಿ ಕಾಯ್ದೆ ತಿದ್ದುಪಡಿ ತಂದು ಜಾರಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಗಳವಾರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೈಗಾರಿಕೆ ಸ್ಥಾಪನೆಗಾಗಿ ಈ ಹಿಂದೆ ಅರ್ಜಿ ಸಲ್ಲಿಸಿದರೆ, 5-10 ವರ್ಷ ಕಾಯಬೇಕಿತ್ತು. ಆದರೆ, ಈಗ ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಇದರಿಂದ ಭೂಪರಿವರ್ತನೆಯು 30 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಇನ್ನಷ್ಟು ಈ ವಿಧಾನವನ್ನು ಸರಳಗೊಳಿಸುವ ಕುರಿತು ಅಧ್ಯಯನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಕಚ್ಚಾ ವಸ್ತುಗಳು, ಮಾನವ ಸಂಪನ್ಮೂಲ ಇರುವ ಜಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ, ಇದರಿಂದ ಸುಮಾರು ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಸಂಪತ್ತು ಹೆಚ್ಚುವುದರೊಂದಿಗೆ ಗ್ರಾಮೀಣ ಅಭಿವೃದ್ದಿ ಕೂಡಾ ಆಗಲಿದೆ. ಕರ್ನಾಟಕಕ್ಕಿಂತ ಗುಜರಾತ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪಾದನೆ ನಡೆಯಲಿದೆ. ರಾಜ್ಯದಲ್ಲಿ ಅಂದಾಜು ಶೇ. 80ರಷ್ಟು ಸಣ್ಣ ಕೈಗಾರಿಕೆಗಳು ಬಾಡಿಗೆ ಜಾಗದಲ್ಲಿದ್ದು, ಈ ಕಾಯ್ದೆ ತಿದ್ದುಪಡಿಯಿಂದ ಕೈಗಾರಿಕೆಗಳನ್ನು ಸ್ವಂತ ಜಾಗದಲ್ಲಿ ಪ್ರಾರಂಭ ಮಾಡಬಹುದು. ರಾಜ್ಯದಲ್ಲಿ ಲಕ್ಷಾಂತರ ಎಕರೆಗಳಷ್ಟು ಭೂಮಿಯಲ್ಲಿ ಉಳುಮೆ ಮಾಡುತ್ತಿಲ್ಲ.
ಕೃಷಿ ವಿವಿಯಿಂದ ಪ್ರತೀ ವರ್ಷ ಹಲವು ಮಂದಿ ಪದವಿ ಪಡೆದು ಬರುತ್ತಿದ್ದಾರೆ. ಆದರೆ, ಅವರಲ್ಲಿ ಕೇವಲ ಶೇ.5ರಷ್ಟು ಮಂದಿಗೆ ಮಾತ್ರವೇ ಉದ್ಯೋಗ ನೀಡುತ್ತಿದ್ದೇವೆ. ಹಾಗಾದರೆ ಉಳಿದ 95 ಮಂದಿ ಏನು ಮಾಡಬೇಕು. ಅವರಿಗೂ ಕೂಡಾ ಕೃಷಿಯ ಬಗ್ಗೆ ಸಂಪೂರ್ಣವಾದ ಜ್ಞಾನ ಇರುತ್ತದೆ. ಭೂಮಿ ಖರೀದಿ ಮಾಡಲು ಅವರಿಗೆ ಸಾಧ್ಯವಾಗದಿದ್ದರೆ ಹೇಗೆ ಎಂದು ಕೇಳಿದರು.