ಬೆಂಗಳೂರು, ಜೂ.17 (DaijiworldNews/MB) : ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತ ಚೀನಾ ಯೋಧರ ನಡುವಿನ ಸಂಘರ್ಷದ ವರದಿಯು ಆತಂಕಕಾರಿಯಾಗಿದ್ದು, ಘರ್ಷಣೆ ಶಮನಗೊಳಿಸುವ ಪ್ರಕ್ರಿಯೆ ನಡುವೆ ನಮ್ಮ ಯೋಧರು ಪ್ರಾಣ ಕಳೆದುಕೊಂಡದ್ದೇಕೆ? ಎಂದು ಕೇಂದ್ರ ಸರ್ಕಾರವನ್ನು ರಾಜ್ಯಸಭಾ ಸದಸ್ಯ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ವರದಿಯು ಆತಂಕಕಾರಿಯಾಗಿದ್ದು ಘರ್ಷಣೆ ಶಮನಗೊಳಿಸುವ ಪ್ರಕ್ರಿಯೆ ನಡುವೆ ನಮ್ಮ ಯೋಧರು ಪ್ರಾಣ ಕಳೆದುಕೊಂಡದ್ದೇಕೆ? ಎಂಬುದಕ್ಕೆ ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಿಯರೊಂದಿಗಿನ ಗಡಿ ವಿಷಯದ ಬಗ್ಗೆ ರಾಷ್ಟ್ರಕ್ಕೆ ಸ್ಪಷ್ಟವಾದ ಚಿತ್ರಣವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ರಾಷ್ಟ್ರದ ಗಡಿಗಳನ್ನು ಕಾಪಾಡಿಕೊಂಡು ಪ್ರಾಣ ತ್ಯಾಗ ಮಾಡಿದ ಕೆಚ್ಚೆದೆಯ ಸೈನಿಕರಿಗೆ ನಮಸ್ಕರಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಸೈನಿಕರ ಕುಟುಂಬಗಳು ಮತ್ತು ಸ್ನೇಹಿತರಿಗೂ ನನ್ನ ಸಂತಾಪ ಸೂಚಿಸುತ್ತೇನೆ. ನಾವೆಲ್ಲರೂ ಈಗ ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಸೋಮವಾರ ತಡರಾತ್ರಿ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಘರ್ಷನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಚೀನಾದ 43 ಯೋಧರು ಹತ್ಯೆಯಾಗಿದ್ದಾರೆ.