ನವದೆಹಲಿ, ಜೂ 17 (Daijiworld News/MSP): ಪೂರ್ವ ಲಡಾಕ್ ನಲ್ಲಿ ಭಾರತ - ಚೀನ ಸಂಘರ್ಷ ಮುಂದುವರಿದಿದ್ದು, ಭಾರತದ ಓರ್ವ ಸೇನಾಧಿಕಾರಿ ಸೇರಿದಂತೆ 20 ಮಂದಿ ಸೈನಿಕರು ಹುತಾತ್ಮರಾಗಿದ್ಧಾರೆ. ಇದೇ ವೇಳೆ ಚೀನದ 40ಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿದ್ದಾರೆ. ಭಾರತ - ಚೀನಾ ಗಡಿ ಸಂಘರ್ಷ ಮೊದಲೇನೂ ಅಲ್ಲವಾದರೂ ಕಳೆದ 44 ವರ್ಷಗಳಲ್ಲೇ ಮೊದಲ ಬಾರಿ ಹೀಗೆ ಚೀನಾ ಜತೆಗಿನ ಸಂಘರ್ಷದಲ್ಲಿ ಸೈನಿಕರು ಹತ್ಯೆಯಾಗಿದ್ದಾರೆ.
ಶಾಂತಿ ಮಂತ್ರ ಪಠಿಸುತ್ತಲೇ ಬೆನ್ನಿಗೆ ಚೂರಿ ಇರಿಯುವ ಚೀನಾದ ಪ್ರಯತ್ನ ಗಮನಿಸಿದಾಗಲೆಲ್ಲಾ ಭಾರತ ವಿರುದ್ದ ಚೀನಾ ದೇಶವೂ ‘ಸಲಾಮಿ ಸ್ಲೈಸಿಂಗ್’ ತಂತ್ರ ಅನುಸರಿಸುತ್ತಿದೆಯೇ ಎಂಬ ಅನುಮಾನ ದಟ್ಟವಾಗತೊಡಗಿದೆ.
ಏನಿದು ಮಿಲಿಟರಿ ಭಾಷೆಯ 'ಸಲಾಮಿ ಸ್ಲೈಸಿಂಗ್':
ಮಿಲಿಟರಿ ಪರಿಭಾಷೆಯಲ್ಲಿ, ಸಲಾಮಿ ಸ್ಲೈಸಿಂಗ್ ಎಂಬ ಪದವನ್ನು ವಿರೋಧಗಳನ್ನು ಜಯಿಸಲು ಮತ್ತು ಹೊಸ ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಬೆದರಿಕೆಗಳು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಒಳಗೊಂಡಿರುವ ಒಂದು ತಂತ್ರ ಎಂದು ವಿವರಿಸಲಾಗಿದೆ.
ಅಂದರೆ ಗಡಿ ಅಥವಾ ಸೀಮೆಗಳು ಸ್ಪಷ್ಟವಾಗಿ ಇರದ ಪ್ರದೇಶಗಳೆಲ್ಲ ಇಂಚಿಂಚು ಜಾಗವನ್ನು ಕಬಳಿಸಲು ಮಾಡುವ ಸಂಚನ್ನು ಮಿಲಿಟರಿ ಭಾಷೆಯಲ್ಲಿ ‘ಸಲಾಮಿ ಸ್ಲೈಸಿಂಗ್’ ಎಂದು ಕರೆಯಲಾಗುತ್ತದೆ.
ಇದನ್ನು ಕಾರ್ಯಗತಗೊಳಿಸುವುದು ಹೇಗೆ ಅಂದರೆ, ಮೊದಲು ಸೀಮಾರೇಖೆಯ ಒಳನುಗ್ಗಿಬಿಡುವುದು ಆ ಬಳಿಕ ಹಿಂದೆ ಸರಿದಂತೆ ನಾಟಕವಾಡಿ ಸಂಪೂರ್ಣವಾಗಿ ಹಿಂದೆ ಸರಿಯದೇ ಸ್ವಲ್ಪ ಜಾಗವನ್ನು ಉಳಿಸಿಕೊಳ್ಳುವುದು. ಎಲ್ಲೆಲ್ಲಾ ಗಡಿ ರೇಖೆ ಸ್ಪಷ್ಟವಾಗಿ ಇಲ್ಲವೋ ಅಲ್ಲಿ ಚೀನಿ ಸೈನಿಕರು ಒಮ್ಮಿಂದೊಮ್ಮೆಲೆ ಸದ್ದಿಲ್ಲದೇ ನುಸುಳಿ ಬಳಿಕ ನಡೆಸುವ ಹುನ್ನಾರವಿದು. ಭಾರತಕ್ಕೆ ಚೀನದ ನಡೆ ತಿಳಿಯುತ್ತಿದ್ದಂತೆ ಸೈನಿಕರನ್ನು ಕಳುಹಿಸಲಾಗುತ್ತದೆ. ಸ್ಪಷ್ಟ ಗಡಿಯನ್ನು ಸೂಚಿಸುವ ಯಾವುದೇ ಭೌತಿಕ ರಚನೆಗಳು ಇರದ ಕಾರಣ, ಚೀನಿ ಸೈನಿಕರು ತಾವು ಸಂಪೂರ್ಣವಾಗಿ ಹಿಂದೆ ಸರಿದಿದ್ದೇವೆ ಎಂದೇ ವಾದಿಸುತ್ತಾರೆ.
ಚೀನಾ ಸಲಾಮಿ ಸ್ಲೈಸಿಂಗ್ ತಂತ್ರಗಳು:
ಎರಡನೆಯ ಮಹಾಯುದ್ಧದ ನಂತರದ ತನ್ನ ಪ್ರಾದೇಶಿಕ ವ್ಯಾಪ್ತಿಯನ್ನು ತನ್ನ ನೆರೆಹೊರೆಯವರ ವ್ಯಾಫ್ತಿಯಲ್ಲಿ ವಿಸ್ತರಿಸುತ್ತಿರುವ ಏಕೈಕ ದೇಶ ಚೀನಾ. ಈ ವಿಸ್ತರಣೆ ಪ್ರಾದೇಶಿಕವಾಗಿ ಮತ್ತು ಕಡಲ ಪ್ರದೇಶಗಳಲ್ಲಿ ನಡೆದಿದೆ. ಸಲಾಮಿ ಸ್ಲೈಸಿಂಗ್ ದಕ್ಷಿಣ ಚೀನಾ ಸಮುದ್ರ ಮತ್ತು ಹಿಮಾಲಯನ್ ಪ್ರದೇಶಗಳಲ್ಲಿ ಪ್ರಾದೇಶಿಕ ವಿಸ್ತರಣೆಯ ಕಾರ್ಯತಂತ್ರವನ್ನು ಸೂಚಿಸುತ್ತದೆ. ಹಿಮಾಲಯದಲ್ಲಿ ಚೀನಾದ ಸಲಾಮಿ ಸ್ಲೈಸಿಂಗ್ ತಂತ್ರಗಳ ಪರಿಣಾಮವಾಗಿ ಡೋಕ್ಲಾಮ್ ನಿಲುವು ಉಂಟಾಗಿದೆ ಎಂದು ಹಲವರು ನಂಬುತ್ತಾರೆ.