ನವದೆಹಲಿ, ಜೂ 17 (Daijiworld News/MSP): ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಸಂಘರ್ಷದಲ್ಲಿ ದೇಶದ ಕಮಾಂಡಿಂಗ್ ಅಧಿಕಾರಿ ಸೇರಿ 20 ಮಂದಿ ಯೋಧರು ಹುತಾತ್ಮರಾದ ಬೆನ್ನಲ್ಲೇ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೂನ್ 19 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದು, "ಇದೇ ಜೂನ್ 19ನೇ ತಾರೀಕಿನಂದು ಸಂಜೆ 5 ಗಂಟೆಗೆ ಭಾರತ ಮತ್ತು ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ದೇಶದ ಪ್ರಮುಖ ಪಕ್ಷಗಳ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ" ಎಂದಿದೆ.
ಪೂರ್ವ ಲಡಾಖ್'ನ ಗಲ್ವಾನ್ ಗಡಿಯಲ್ಲಿ ಕಳೆದ 5 ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಸೋಮವಾರ ರಾತ್ರಿ ಏಕಾಏಕಿ ಚೀನಾ ಸೈನಿಕರು ಭಾರತೀಯ ಸೈನಿಕರೊಂದಿಗೆ ದೈಹಿಕ ಸಂಘರ್ಷಕ್ಕಿಳಿದಿದ್ದು ಇದರ ಪರಿಣಾಮ ಭಾರತೀಯ 20 ಮಂದಿ ಯೋಧರು ಮೃತಪಟ್ಟಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕರು ಮುಗಿಬಿದ್ದಿದ್ದರು.