ಬಾಗಲಕೋಟೆ, ಜೂ.17 (DaijiworldNews/MB) : ಸಾರಿಗೆ ನಿಗಮಗಳ ನೌಕರರ ಜೂನ್ ತಿಂಗಳ ವೇತನ ಬಾಬ್ತು 326 ಕೋಟಿಯಲ್ಲಿ ಅರ್ಧಭಾಗ ಸರ್ಕಾರದಿಂದಲೇ ಪಾವತಿಸಲಾಗುವುದು ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಈ ಬಗ್ಗೆ ಮುಧೋಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆ ನೌಕರರು ಜೂನ್ ತಿಂಗಳು ಸೇರಿದಂತೆ ಮುಂದಿನ ದಿನಗಳಲ್ಲಿ ವೇತನದ ಕುರಿತಾಗಿ ಚಿಂತೆ ಮಾಡಬೇಕಾಗಿಲ್ಲ. ಯಾರಿಗೂ ಸಂಬಳವನ್ನು ಕಡಿತ ಮಾಡದೆ ನಿಗದಿತ ಅವಧಿಯಲ್ಲೇ ಸಂಬಳ ನೀಡುತ್ತೇವೆ. ಹಾಗೆಯೇ ಸಿಬ್ಬಂದಿ ಕಡಿತಗೊಳಿಸುವ ಇಲ್ಲವೇ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವ ಯಾವುದೇ ನಿರ್ಧಾರವಿಲ್ಲ. ಎಲ್ಲರೂ ಚಿಂತಿಸದೆ ಕೆಲಸ ನಿರ್ವಹಿಸಿ ಎಂದು ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ನಾಲ್ಕು ನಿಗಮಗಳಿಗೆ 2300 ಕೋಟಿ ನಷ್ಟವಾಗಿದ್ದು ಅದರಿಂದ ಚೇತರಿಸಿಕೊಳ್ಳಬೇಕಿದೆ. ಹಾಗಾಗಿ ಕೊರೊನಾ ಸಂಕಷ್ಟ ಸಂಪೂರ್ಣವಾಗಿ ಸರಿಯಾಗಿ ಎಲ್ಲಾ ಸಹಜ ಸ್ಥಿತಿಗೆ ಮರಳುವವರೆಗೂ ನೌಕರರ ವೇತನ ಪಾವತಿಸಲು ಸರ್ಕಾರದ ನೆರವು ಪಡೆಯುವ ಕುರಿತು ಅದಕ್ಕೆ ವಿಶೇಷ ನಿಧಿ ಸ್ಥಾಪಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ಜನರು ಈಗಲೂ ಕೂಡಾ ಬಸ್ಗಳನ್ನು ಹತ್ತಲು ಹಿಂಜರಿಯುತ್ತಿದ್ದಾರೆ. ಹಾಗೆಯೇ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಬಸ್ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿದ್ದು ಸರ್ಕಾರದ ನೆರವು ಪಡೆಯುವುದು ಅನಿವಾರ್ಯ ಎಂದು ಹೇಳಿದರು.