ಬೆಂಗಳೂರು, ಜೂ 17 (Daijiworld News/MSP): ಭೂಗತ ಪಾತಕಿ ರವಿ ಪೂಜಾರಿಯನ್ನು 10 ದಿನಗಳ ಬೆಂಗಳೂರು ನಗರ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮಂಗಳೂರಿನ ನ್ಯಾಯವಾದಿ ನೌಶಾದ್ ಕಾಶಿಂಜಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರವಿ ಪೂಜಾರಿ ಪ್ರಮುಖ ಆರೋಪಿಯಾಗಿರುವ ಹಿನ್ನಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವನ್ನು ಈ ಹಿಂದೆ ಮಂಗಳೂರಿನ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಪ್ರಕರಣದ ತನಿಖೆಯನ್ನು ಇದೀಗ ಡಿಜಿ- ಐಜಿಪಿ ಪ್ರವೀಣ್ ಸೂದ್ ಸಿಸಿಬಿಗೆ ವರ್ಗಾಯಿಸಿ ಆದೇಶಿಸಿದ್ದಾರೆ ಈ ಹಿನ್ನೆಲೆ ಮಂಗಳೂರಿನಿಂದ ಸಿಸಿಬಿಗೆ ಈ ಕೇಸ್ ವರ್ಗಾವಣೆಯಾಗಿದೆ.
2004ರ ಏ.9ರಂದು ಮಂಗಳೂರಿನ ಪಳ್ನೀರ್ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿಯೇ ನೌಶಾದ್ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭೂಗತ ದೊರೆ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಪರವಾಗಿ ನೌಶಾದ್ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ್ದರು. ಇದರಿಂದ ಕುಪಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿ, ತನ್ನ ಸಹಚರರ ಮೂಲಕ ವಕೀಲ ನೌಶಾದ್ ಅವರನ್ನು ಹತ್ಯೆ ಮಾಡಿಸಿದ್ದ.
ಸೆನೆಗಲ್ ನಲ್ಲಿ ತಲೆಮರೆಸಿಕೊಂಡಿದ್ದ ಡಾನ್ ರವಿ ಪೂಜಾರಿಯನ್ನು ಇತ್ತೀಚೆಗೆ ತಾನೆ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪೂಜಾರಿ ವಿರುದ್ಧ ಕೊಲೆ, ಸುಲಿಗೆ, ಡಕಾಯಿತಿ, ದರೋಡೆ, ಬೆದರಿಕೆ ಸೇರಿದಂತೆ ಬೆಂಗಳೂರು, ಮಂಗಳೂರು ಸೇರಿ 200ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ.