ನವದೆಹಲಿ, ಜೂ 17 (DaijiworldNews/PY) : ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ಸೋಂಕಿತರ ಪೈಕಿ ಶೇ.52.8ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,922 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ದೇಶದಲ್ಲಿ ಒಟ್ಟಾರೆ 1,86,934 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 10,974 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ ಭಾರತದಲ್ಲಿ ಸುಮಾರು 3.54ಲಕ್ಷ ಕೊರೊನಾ ಸೋಂಕಿತರಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿ 1,55,227 ಸಕ್ರಿಯ ಪ್ರಕರಣಗಳಿವೆ.
ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಏರಿಕೆಯ ನಡುವೆಯೂ ಈ ಕಡೆ ಕೊರೊನಾ ಸೋಂಕಿತರ ಸಾವಿನ ಪ್ರಮಾಣದಲ್ಲಿಯೂ ಕೂಡಾ ಅಲ್ಪ ಪ್ರಮಾಣ ಏರಿಕೆ ಕಂಡುಬಂದಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಎರಡು ಸಾವಿರ ಜನರು ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 11,903ಕ್ಕೆ ಏರಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸಾವಿನ ಪ್ರಮಾಣ ಶೇ.3.36ಕ್ಕೆ ಏರಿಕೆಯಾಗಿದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ವಿವಿಧ ಪ್ರಯೋಗಾಲಯಗಳಲ್ಲಿ 1,63,187 ಕೊರೊನಾ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಕೊರೊನಾ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಪ್ರಯೋಗಾಲಯಗಳು 924 ಹಾಗೂ 250 ಖಾಸಗಿ ಪ್ರಯೋಗಾಲಯ ಸೇರಿದಂತೆ ಸದ್ಯ ದೇಶದಾದ್ಯಂತ 1,174 ಪ್ರಯೋಗಾಲಯಗಳು ಕೊರೊನಾ ಪರೀಕ್ಷೆ ನಡೆಸುತ್ತಿವೆ.