ಬೆಂಗಳೂರು, ಜೂ 10 (DaijiworldNews/SM): ಕೊರೊನಾ ಲಾಕ್ ಡೌನ್ ಸಂಕಷ್ಟದಿಂದಾಗಿ ಸ್ಥಗಿತಗೊಂಡಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂನ್ ೧೮ರ ಗುರುವಾರ ಕೊರೊನಾ ಆತಂಕದ ನಡುವೆಯೇ ನಡೆಯಲಿದೆ. ರಾಜ್ಯದೆಲ್ಲೆಡೆ ಪರೀಕ್ಷೆಗೆ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಲಾಗಿದೆ.
ರಾಜ್ಯದೆಲ್ಲೆಡೆ 1016 ಪರೀಕ್ಷಾ ಕೇಂದ್ರಗಳಲ್ಲಿ 5,95,997 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ ಆವರಣ, ಪರೀಕ್ಷೆ ನಡೆಯುವ ಕೊಠಡಿಗಳನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇನ್ನು ಪ್ರಮುಖವಾಗಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪರೀಕ್ಷಾ ಕೊಠಡಿಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ಪ್ರಮುಖವಾಗಿ ಪರೀಕ್ಷೆ ಆರಂಭಗೊಳ್ಳುವ ಒಂದು ತಾಸು ಮುಂಚಿತವಾಗಿ ವಿದ್ಯಾರ್ಥಿಗಳು ತಮಗೆ ಗೊತ್ತುಪಡಿಸಲಾಗಿರುವ ಕೇಂದ್ರಗಳಲ್ಲಿ ಹಾಜರಾಗಬೇಕಾಗಿದೆ.
ರೋಗ ಲಕ್ಷಣಗಳಿದ್ದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ:
ಇನ್ನು ಕೊರೊನಾ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ಇನ್ನಿತರ ಲಕ್ಷಣಗಳಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಕೊಠಡಿಗಳನ್ನು ಗೊತ್ತುಪಡಿಸಲಾಗಿದೆ. ಅಲ್ಲದೆ, ಕಂಟೈನ್ಮೆಂಟ್ ಝೋನ್ಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇಂತಹ ವಿದ್ಯಾರ್ಥಿಗಳ ಬಗ್ಗೆ ಇತರ ವಿದ್ಯಾರ್ಥಿಗಳು ತಪ್ಪು ತಿಳುವಳಿಕೆಯನ್ನು ಮಾಡಿಕೊಳ್ಳದಂತೆ ಸೂಚಿಸಲಾಗಿದೆ.
ಇನ್ನು ಒಂದೊಮ್ಮೆ ವಿದ್ಯಾರ್ಥಿಗ್ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದಲ್ಲಿ ಅಂತಹ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.