ಇಂಪಾಲ, ಜೂ.18 (DaijiworldNews/MB) : ಮಣಿಪುರದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಸಂಭವಿಸಿದ್ದು ಬಿಜೆಪಿ ಸರ್ಕಾರದಿಂದ 9 ಶಾಸಕರು ಹೊರ ನಡೆದಿದ್ದಾರೆ. ಇದೀಗ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.
ಬಿಜೆಪಿ ಸರ್ಕಾರದಿಂದ ಹೊರಬಂದ ಬಿಜೆಪಿ ಶಾಸಕರು
ಬಿಜೆಪಿಯ ಮೂವರು ಶಾಸಕರಾದ ಹೆಂಗ್ಲೆಪ್ ವಿಧಾನಸಭಾ ಕ್ಷೇತ್ರದ ಟಿ.ತಂಗ್ಜಲಂ ಹಾಕಿಪ್, ತಮೆಂಗ್ಲಾಂಗ್ ವಿಧಾನಸಭಾ ಕ್ಷೇತ್ರದ ಸ್ಯಾಮ್ಯುಯೆಲ್ ಜೆಂಡೈ ಮತ್ತು ನವೋರಿಯಾ ಪಖಂಗ್ಲಕ್ಪಾ ವಿಧಾನಸಭಾ ಕ್ಷೇತ್ರದ ಎಸ್. ಸುಭಾಷ್ ಚಂದ್ರ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದು, ನಾಲ್ವರು ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್ಪಿಪಿ)ಯ ಶಾಸಕ, ಉಪ ಮುಖ್ಯಮಂತ್ರಿ ವೈ. ಜಾಯ್ಮಾರ್ ಸಿಂಗ್, ಎಲ್. ಜಯ ಜಯಂತಕುಮಾರ್ ಸಿಂಗ್, ಎನ್. ಕಾಯಿಸಿ ಮತ್ತು ಲೆಟ್ಪಾವೊ ಹಾಕಿಪ್ ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇನ್ನು ಟಿಎಂಸಿ ಶಾಸಕ ಟಿ. ರೋಬಿಂದ್ರೊ ಸಿಂಗ್ ಮತ್ತು ಪಕ್ಷೇತರ ಶಾಸಕ ಆಶಾಬುದ್ದೀನ್ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದೆ.
2017ರಲ್ಲಿ ನಡೆದ ಚುನಾವಣೆ ವೇಳೆ 60 ಸದಸ್ಯ ಬಲದ ಮಣಿಪುರ ವಿಧಾನಸಭೆಯ 28 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಅತಿದೊಡ್ಡ ಪಕ್ಷವಾಗಿದ್ದು ಬಿಜೆಪಿ 21 ಸ್ಥಾನ ಗಳಿಸಿತ್ತು. ಎನ್ಪಿಪಿ–4, ಎನ್ಪಿಎಫ್–4, ಟಿಂಎಂಸಿ–1, ಪಕ್ಷೇತರರೊಬ್ಬರು ಸೇರಿದಂತೆ ಇತರರು 11 ಸ್ಥಾನಗಳಿಸಿದ್ದರು.
ಮಣಿಪುರದಲ್ಲಿ 8 ಕಾಂಗ್ರೆಸ್ ಶಾಸಕರು ಈ ಹಿಂದೆಯೇ ಪಕ್ಷ ತೊರೆದಿದ್ದು ಆ ಪೈಕಿ ಒಬ್ಬರು ಅನರ್ಹಗೊಂಡಿದ್ದು, ಉಳಿದ 7 ಶಾಸಕರ ಅನರ್ಹತೆ ಅರ್ಜಿ ವಿಚಾರಣೆ ಹಂತದಲ್ಲಿದೆ. ಅವರು ವಿಧಾನಸಭೆಗೆ ಪ್ರವೇಶಿಸಬಾರದು ಎಂದೂ ಮಣಿಪುರ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿದೆ. ಏತನ್ಮಧ್ಯೆ ಮಣಿಪುರದ ಬಿಜೆಪಿ ಸರ್ಕಾರವು ಅಲ್ಪಮತಕ್ಕೆ ಕುಸಿದು ಪತನದ ಅಂಚಿನಲ್ಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಇಬೋಬಿ ಸಿಂಗ್, ಬಿಜೆಪಿ ಬಹುಮತ ಕಳೆದುಕೊಂಡಿದ್ದು ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ 19ರಂದು ಚುನಾವಣೆ ನಿಗದಿಯಾಗಿದ್ದು ಈ ನಡುವೆ ದಿಢೀರ್ ರಾಜಕೀಯ ಬೆಳವಣಿಗೆ ಸಂಭವಿಸಿದೆ.