ನವದೆಹಲಿ, ಜೂ.18 (DaijiworldNews/MB) : ಚೀನಾವು ಗಲ್ವಾನ್ ಕಣಿವೆ ಎಂದಿಗೂ ನಮಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದು ಅದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಚೀನಾದ ಈ ಮಾತನ್ನು ಎಂದಿಗೂ ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
ಬುಧವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವರು ಪರಸ್ಪರ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, ಈ ವಿಚಾರ ಬಹಳ ಸೂಕ್ಷ್ಮವಾಗಿದ್ದು ಉಭಯ ರಾಷ್ಟ್ರಗಳು ಜವಾಬ್ದಾರಿಯುತವಾಗಿ ಇದನ್ನು ನಿರ್ವಹಿಸಬೇಕು. ಉಭಯ ರಾಷ್ಟ್ರಗಳು ಕೂಡಾ ಕಳೆದ ಜೂನ್ 6ರಂದು ಕೈಗೊಂಡ ತೀರ್ಮಾನಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಹಾಗೆಯೇ ಚೀನಾ ಅವಾಸ್ತಾವಿಕವಾದ ಹಾಗೂ ಒಪ್ಪಲು ಅಸಾಧ್ಯವಾದದನ್ನು ತನ್ನ ಹಕ್ಕು ಎಂದು ಪ್ರತಿಪಾಧಿಸಿದರೆ ಅದನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಲಡಾಕ್ ಗಡಿಭಾಗದಲ್ಲಿ ಘರ್ಷಣೆಯಲ್ಲಿ ಕಳೆದ ಸೋಮವಾರ ರಾತ್ರಿ ಎರಡೂ ಕಡೆಯ ಸೈನಿಕರು ಸಾವನ್ನಪ್ಪಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯವು ಭಾರತದ ಯೋಧರು ಗಡಿ ಉಲ್ಲಂಘಿಸಿ ಬಂದು ಪ್ರಚೋಧನಕಾರಿ ಚಟುವಟಿಕೆ ನಡೆಸಿದರೆ ನಮಗೆ ಸಹಿಸಲಾಗುವುದಿಲ್ಲ. ಗಲ್ವಾನ್ ಕಣಿವೆ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ಹೇಳಿತ್ತು.