ಬೆಂಗಳೂರು, ಜೂ 18 (DaijiworldNews/PY) : ಇಡೀ ದೇಶದ ಆರ್ಥಿಕ ವ್ಯವಸ್ಥೆ ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿದೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಲ್ಲ. ರೈತರನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಸರ್ಕಾರದ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಸಹ ಕೈಜೋಡಿಸಬೇಕು ಎಂದು ಸಿಎಂ ಬಿಎಸ್ವೈ ಅವರು ಮನವಿ ಮಾಡಿದರು.
ಬುಧವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ರೈತರಿಗೆ ಬಿತ್ತನೆ ಬೀಜಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾದಿಂದ ಸೃಷ್ಠಿಯಾಗಿರುವ ಸಂಕಷ್ಟದಿಂದ ಹೊರಬರಲು ರಾಜ್ಯದ ಎಲ್ಲಾ ವರ್ಗದ ಜನರಿಗಾಗಿ 2,284 ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಲಾಗಿದ್ದು, ಒಟ್ಟು 47.81 ಲಕ್ಷ ರೈತರಿಗೆ ತಲಾ 2,000 ವಿತರಿಸಲು 956.36 ಕೋಟಿ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ತಮ್ಮ ಬೆಳೆಗಳ ಕಟಾವಿನ ನಂತರ ಸಣ್ಣ ಹಿಡುವಳಿದಾರರು ಹಾಗೂ ಕೃಷಿ ಭೂಮಿ ನಿರ್ವಹಣೆಗಾಗಿ ವಲಸೆ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಕೊರೊನಾದಿಂದಾಗಿ ಕೃಷಿ ಚಟುವಟಿಕೆಗಳನ್ನು ಮಾಡಲಾಗದೇ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.