ಬೆಂಗಳೂರು, ಜೂ.18 (DaijiworldNews/MB) : ಹೊರರಾಜ್ಯದಿಂದ ಜನ ಬಾರದಿದ್ದರೆ ಸೋಂಕು ನಿಯಂತ್ರಣದಲ್ಲಿರುತ್ತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಾಸ್ಕ್ ಧರಿಸುವ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಸ್ಕ್ ದಿನಾಚರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಮಾಸ್ಕ್ ಹಾಕುವುದರಿಂದ ಸೋಂಕು ತಡೆಗಟ್ಟ ಬಹುದು. ವಿಶ್ವ ಸಂಸ್ಥೆಯೇ ಇದನ್ನು ಹೇಳಿದೆ. ನಮ್ಮ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಕ್ರಮ ಕೈಗೊಂಡಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರೇ ಹೊಗಳಿದ್ದಾರೆ ಎಂದರು.
ರಾಜ್ಯಕ್ಕೆ ಹೊರ ರಾಜ್ಯದಿಂದ ಜನ ಬಾರದಿದ್ದರೆ ಸೋಂಕು ನಿಯಂತ್ರಣದಲ್ಲಿರುತ್ತಿತ್ತು. ಇನ್ನು ಕೂಡಾ ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ವತಿಯಿಂದ ಈ ಕಾರ್ಯಕ್ರಮ ನಡೆದಿದ್ದು ಸಚಿವರಾದ ಶ್ರೀರಾಮುಲು, ಆರ್. ಅಶೋಕ್, ಸಿ.ಟಿ. ರವಿ, ಎಸ್.ಟಿ.ಸೋಮಶೇಖರ್ ಹಾಗೂ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟ ಪುನೀತ್ ರಾಜಕುಮಾರ್, ನಟಿ ರಾಗಿಣಿ ದ್ವಿವೇದಿ ಕೂಡಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.