ನವದೆಹಲಿ, ಜೂ.18 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಒಂದೇ ದಿನದಲ್ಲಿ 12,881 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 334 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,66,946ಕ್ಕೆ ಏರಿಕೆಯಾಗಿದ್ದು ಒಟ್ಟು 12,237 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಲ್ಲಿದ್ದು 160384 ಪ್ರಕರಣಗಳು ಸಕ್ರಿಯವಾಗಿದ್ದು, 1,94,325 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು ಸೋಂಕಿತರ ಪೈಕಿ ಶೇ.52.8ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಸೋಂಕು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 1,16,752 ಜನರಿಗೆ ಸೋಂಕು ತಗುಲಿದ್ದು 5,651 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 59,166 ಮಂದಿ ಗುಣಮುಖರಾಗಿದ್ದು 51,935 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 7,734 ಮಂದಿಗೆ ಸೋಂಕು ದೃಢಪಟ್ಟಿದ್ದು 102 ಮಂದಿ ಸಾವನ್ನಪ್ಪಿದ್ದಾರೆ. 2,828 ಸಕ್ರಿಯ ಪ್ರಕರಣಗಳಾಗಿದ್ದು 4804 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 50,193, ದೆಹಲಿಯಲ್ಲಿ 47,102, ಗುಜರಾತ್ನಲ್ಲಿ 25,093, ಉತ್ತರ ಪ್ರದೇಶದಲ್ಲಿ 14,598, ರಾಜಸ್ತಾನದಲ್ಲಿ 13,542, ಮಧ್ಯಪ್ರದೇಶದಲ್ಲಿ 11,244, ಪಶ್ಚಿಮ ಬಂಗಾಳದಲ್ಲಿ 12,300 ಕೊರೊನಾ ಪ್ರಕರಣಗಳು ದಾಖಲಾಗಿದೆ.