ನವದೆಹಲಿ, ಜೂ 18(Daijiworld News/MSP): ಸಾಂಕ್ರಮಿಕ ರೋಗ ಕೋವಿಡ್-19 ಸಂಕಷ್ಟದ ನಡುವೆಯೂ ಭಾರತಕ್ಕೆ ಶುಭ ಸಮಾಚಾರವೊಂದು ದೊರಕಿದೆ. ಭಾರತವೂ ಪ್ರಪಂಚದಲ್ಲೇ ಅತೀ ಹೆಚ್ಚು ವಿದೇಶಿ ನೇರ ಬಂಡವಾಳ(ಎಫ್ಡಿಐ) ಆಕರ್ಷಿಸಿದ 9ನೇ ರಾಷ್ಟ್ರವಾಗಿದೆ.
ವಿಶ್ವಸಂಸ್ಥೆಯ ವ್ಯಾಪಾರ ಸಂಸ್ಥೆಯಾದ ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್ಮೆಂಟ್ (ಯುಎನ್ಸಿಟಿಎಡಿ) ಯ ವರದಿಯ ಪ್ರಕಾರ, 2019 ರಲ್ಲಿ 51 ಬಿಲಿಯನ್ ಮೌಲ್ಯದ (3.87 ಲಕ್ಷ ಕೋಟಿ ರೂ.) ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಿದ್ದು ಭಾರತವು ವಿಶ್ವದ ನೇರ ಹೂಡಿಕೆಯ 9 ನೇ ಅತಿದೊಡ್ಡ ರಾಷ್ಟ್ರವಾಗಿದೆ.
ಕೋವಿಡ್ 19 ರ ನಂತರದ ಅವಧಿಯಲ್ಲಿ ಭಾರತದಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆ ಇದ್ದರೂ ಸಕಾರಾತ್ಮಕ ಮತ್ತು ದೊಡ್ಡ ಮಾರುಕಟ್ಟೆ ಹೂಡಿಕೆಗಳನ್ನು ಆಕರ್ಷಿಸುವುದನ್ನು ಮುಂದುವರಿಸುತ್ತದೆ ಎಂದು ಯುಎನ್ಸಿಟಿಎಡಿ ಸೋಮವಾರ ತನ್ನ ವಿಶ್ವ ಹೂಡಿಕೆ ವರದಿ 2020 ವರದಿಯಲ್ಲಿ ತಿಳಿಸಿದೆ.
ಇದಕ್ಕೂ ಮೊದಲು, ಕಳೆದ 2018ರಲ್ಲಿ ಭಾರತ 42 ಶತಕೋಟಿ ಡಾಲರ್ನಷ್ಟು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿತ್ತು. ಈ ಮೂಲಕ ವಿಶ್ವದಲ್ಲಿ ಅತೀಹೆಚ್ಚು ಎಫ್ಡಿಐ ಆಕರ್ಷಿಸಿದ ರಾಷ್ಟ್ರಗಳಲ್ಲಿ ಭಾರತವು 12ನೇ ಸ್ಥಾನದಲ್ಲಿತ್ತು. 2019 ರಲ್ಲಿ ಒಳಹರಿವು 9 ಬಿಲಿಯನ್ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.