ಬೆಂಗಳೂರು, ಜೂ.18 (DaijiworldNews/MB) : ಚೀನಾದೊಂದಿಗೆ ನಡೆದ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮೌನವಾಗಿರುವುದು ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಕಾಂಗ್ರೆಸ್ ಶಾಸಕಾಂಗ ಸಭೆಯ ಮಾತನಾಡಿದ ಅವರು, ನಮ್ಮ ಸೇನೆ ಅತ್ಯಂತ ಶಕ್ತಿಶಾಲಿಯಾಗಿದೆ. ಆದರೆ ಗಡಿಯಲ್ಲಿ ಆಗುತ್ತಿರುವ ಸಂಘರ್ಷದ ಬಗ್ಗೆ ಪ್ರಧಾನಿಯವರ ಮೌನ ಸರಿಯಲ್ಲ. ಹುತಾತ್ಮರಾದ ನಮ್ಮ ಯೋಧರ ಶೌರ್ಯ, ತ್ಯಾಗ, ಬಲಿದಾನ ಸದಾ ಸ್ಮರಣೀಯ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದರು.
ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದು ಪೆಟ್ರೋಲ್, ಡೀಸೆಲ್ ಲೀಟರ್ ಗೆ 25-30 ರೂ.ಪ್ರಕಾರ ಮಾರಾಟವಾಗಬೇಕಿತ್ತು. ಆದರೆ ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ಏರಿಕೆ ಮಾಡಿ ಮಧ್ಯಮ ವರ್ಗದವರನ್ನು ಬಲಿ ಪಡೆಯಲು ಮುಂದಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು ದೇಶದ ಆರ್ಥಿಕತೆ ಮತ್ತು ಜನರ ಆರೋಗ್ಯವನ್ನು ಪ್ರಧಾನಿ ಮೋದಿ ಹಾಳು ಮಾಡಲು ಹೊರಟಿದ್ದಾರೆ. ಇತ್ತ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಲು ಮುಂದಾಗಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಹೇಳಿದರು.